Chikmagalur
ಮಾಡದ ತಪ್ಪಿಗೆ ೧೪ ವರ್ಷದಿಂದ ಬಹಿಷ್ಕಾರ ಶಿಕ್ಷೆ – ರಾಗಿಬಸವನಹಳ್ಳಿಯಲ್ಲಿ ಅನಿಷ್ಟ ಬಹಿಷ್ಕಾರ ಪದ್ದತಿ ಇಂದಿಗೂ ಜೀವಂತ
ನ್ಯಾಯಕ್ಕಾಗಿ ಹೋರಾಡಿ ಪ್ರಾಣ ಬಿಡುತ್ತೇವೆ, ಸ್ವತಂತ್ರ ಒತ್ತೆ ಇಡಲ್ಲ, ನ್ಯಾಯಕ್ಕಾಗಿ ಅಲೆದು ಅಲೆದು ಸುಸ್ತಾದ ಪುಟ್ಟಸ್ವಾಮಿ ಕುಟುಂಬ
ಚಿಕ್ಕಮಗಳೂರು : ಸಾಮಾಜಿಕ ಬಹಿಷ್ಕಾರ ದಂತಹ ಅನಿಷ್ಟ ಪದ್ದತಿ ಇನ್ನು ಕೂಡಾ ಜೀವಂತವಾಗಿದೆ ಎನ್ನುವುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ರಾಗಿಬಸವನಹಳ್ಳಿ ಗ್ರಾಮ ಸಾಕ್ಷಿಯಾಗಿದ್ದು. ಸಾಮಾಜಿಕ ಬಹಿಷ್ಕಾರ ಅನ್ನೋ ಅನಿಷ್ಟ ಪದ್ಧತಿ ತೊಲಗಿದಂತೆ ಕಾಣುತ್ತಿಲ್ಲ.ಈ ಗ್ರಾಮದ ಒಂದು ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದ್ದು. ಕಳೆದ ೧೪ ವರ್ಷದಿಂದ ನ್ಯಾಯಕ್ಕಾಗಿ ಹೋರಾಡುತ್ತಿದೆ.

೧೪ ವರ್ಷದ ಹಿಂದೆ ಈ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದ್ದ ವ್ಯಕ್ತಿಯೊಬ್ಬರ ಬಳಿ ಅಡಕೆ ಏರಲು ಎತ್ತಿನ ಗಾಡಿಯನ್ನು ಕೇಳಿ ಪಡೆದುಕೊಂಡಿದ್ದ ಎಂಬ ಒಂದೇ ಒಂದು ಕಾರಣಕ್ಕಾಗಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪುಟ್ಟಸ್ವಾಮಿ ಮತ್ತಾತನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಈ ವೇಳೆ ತಪ್ಪೊಪ್ಪಿಕೊಂಡು ೧೧೦೧ ರೂ. ದಂಡ ಕಟ್ಟಿ ತಪ್ಪಿಕೊಳ್ಳುವಂತೆ ಷರತ್ತು ವಿಧಿಸಿದ್ದಾರೆ. ಆದರೆ, ಸಾವಿರಾರು ಮಹನೀಯರ ಪ್ರಾಣ ತ್ಯಾಗದಿಂದ ದೊರೆತಿರುವ ಸ್ವತಂತ್ರವನ್ನು ಮಾರಿಕೊಳ್ಳುವುದಿಲ್ಲ. ಸ್ವಾಭಿಮಾನದಿಂದಲೇ ಬದುಕುತ್ತೇನೆ ಎಂದು. ಅಂದಿನಿಂದ ಇಂದಿನವರೆಗೂ ನ್ಯಾಯಕ್ಕಾಗಿ ಪೊಲೀಸ್ ಠಾಣೆ, ಜಿಲ್ಲಾಧಿಕಾರಿ ಕಚೇರಿ ಬಾಗಿಲು ತಟ್ಟಿದ್ದಾರೆಯೇ ವಿನಃ ಗ್ರಾಮದ ಮುಂದೆ ಒತ್ತೆಯಾಳಾಗಲು ಇಚ್ಛೆಪಟ್ಟಿಲ್ಲ.
ರಾಗಿಬಸವನಹಳ್ಳಿಯಲ್ಲಿ ಈ ಹಿಂದಿನಿಂದಲೂ ಈ ಅನುಷ್ಟ ಪದ್ದತಿ ನಡೆದುಕೊಂಡುಬಂದಿದ್ದು. ಬಹಿಷ್ಕಾರಕ್ಕೊಳಗಾಗಿರುವ ಪುಟ್ಟಸ್ವಾಮಿಯನ್ನ ಗ್ರಾಮದ ಯಾರಾದರೂ ಮಾತನಾಡಿಸಿದರೆ ಅಂದೇ ಗ್ರಾಮದಲ್ಲಿ ಪಂಚಾಯ್ತಿ ಸೇರಿ, ದಂಡ ವಿಧಿಸುವ ಪದ್ದತಿ ಇಂದಿಗೂ ಕೂಡಾ ಜೀವಂತವಾಗಿರುವುದರ ಜೊತೆಗೆ ಈ ಗ್ರಾಮದ ಬಹುತೇಕ ಪ್ರಜ್ಞಾವಂತರು ಬದುಕಿದ್ದೂ ನಿತ್ಯ ಸಾಯುವಂತೆ ಮಾಡಿದೆ.
ಒಟ್ಟಾರೆ ನಾಗರಿಕ ಸಮಾಜ ಬೆಳೆದಂತೆ ಅನಿಷ್ಟ ಪದ್ಧತಿಗಳು ದೂರಾಗುತ್ತವೆ ಅಂತಾ ನಂಬಿರೋ ಈ ದಿನಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿರೋದು ದುರಂತದ ಸಂಗತಿ. ಈ ಕುರಿತು ದೂರು ನೀಡಲಾಗಿದ್ರೂ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿರೋ ಅಧಿಕಾರಿಗಳ ಕ್ರಮ ಕೂಡ ಖಂಡನೀಯ. ಆದಷ್ಟು ಬೇಗ ಇವರ ಕುಟುಂಬಕ್ಕೆ ನ್ಯಾಯ ಸಿಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

* ಊರವರು ಮಾತಡ್ಸಲ್ಲ, ಅಂಗಡಿಯಲ್ಲಿ ದಿನಸಿ ಕೊಡಲ್ಲ :
ಕಳೆದ ಹದಿನಾಲ್ಕು ವರ್ಷಗಳ ಹಿಂದೆ ಗ್ರಾಮಸ್ಥರು ಪುಟ್ಟಸ್ವಾಮಿ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಊರಿನವರು ಕೆಲಸಕ್ಕೆ ಕರೆಯುತ್ತಿಲ್ಲ. ಅಂಗಡಿಗೆ ಹೋದ್ರೆ ದಿನಸಿ ಪದಾರ್ಥ ಕೊಡುತ್ತಿಲ್ಲ. ಮೋಟರ್ ರೀವೈಂಡಿಂಗ್ ಕೆಲಸ ಮಾಡಿ ಬದುಕುತ್ತಿರುವ ಈ ಕುಟುಂಬವನ್ನ ಊರಿನಿಂದ ಹೊರ ಇಡಲಾಗಿದೆ. ಸದ್ಯ ತೋಟದಲ್ಲೇ ಮನೆ ಕಟ್ಟಿಕೊಂಡಿರೋ ಪುಟ್ಟಸ್ವಾಮಿ ಅಕ್ಕಪಕ್ಕದ ಹಳ್ಳಿಗಳಿಗೆ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಆಪತ್ತು ಎಂಬುದು ಎದುರಾದರೆ ಸಹಾಯಕ್ಕೆ ನಿಲ್ಲುವವರಿಲ್ಲದೆ ಈ ಕುಟುಂಬ ಆಧುನಿಕ ಯುಗದಲ್ಲೂ ವನವಾಸ ಅನುಭವಿಸುತ್ತಿದೆ.
* ಪೊಲೀಸರಿಗೆ ದೂರು ಕೊಟ್ರೂ ಕಿಮ್ಮತ್ತಿಲ್ಲ :
ಕಳೆದ ಹದಿನಾಲ್ಕು ವರ್ಷ ಹಿಂದೆ ಬಹಿಷ್ಕಾರಕ್ಕೊಳಗಾಗಿರುವ ಪುಟ್ಟಸ್ವಾಮಿ ಮತ್ತವನ ಕುಟುಂಬ ಅಂದಿನಿಂದಲೂ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದ್ದು. ಈ ಕುರಿತು ಪೊಲೀಸ್ ಠಾಣೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ನಮ್ಮ ಮೇಲಿನ ಬಹಿಷ್ಕಾರ ತೆರವುಗೊಳಿಸಿ ನ್ಯಾಯದ ಜೊತೆಗೆ ಸ್ವತಂತ್ರ ಕೊಡಿಸಿ ಎಂದು ಅಲೆದು ಬೇಸತ್ತು ಸುಮ್ಮನಾಗಿದೆ. ಪೊಲೀಸರು ಗ್ರಾಮಕ್ಕೆ ಬಂದು ಹೋದರೂ ಕೂಡಾ ನಮಗೆ ನ್ಯಾಯ ಸಿಕ್ಕಿಲ್ಲ ಹಾಗಾಗಿ ಇದರ ಕುರಿತು ಯಾವುದೇ ಅಧಿಕಾರಿಗಳ. ಬಳಿ ನ್ಯಾಯ ಕೊಡಿಸುವಂತೆ ಕೇಳುವುದನ್ನೇ ಬಿಟ್ಟಿದ್ದೇವೆ ಎಂದು ಇವರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

* ಬಹಿಷ್ಕಾರಕ್ಕೆ ಕಾರಣವೇನು.?
ಇದಕ್ಕೂ ಮೊದಲು ಬಹಿಷ್ಕಾರಕ್ಕೆ ಒಳಗಾಗಿದ್ದ ಇದೇ ರಾಗಿ ಬಸವನಹಳ್ಳಿ ಗ್ರಾಮದ ಉಪ್ಪಾರ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯೊಬ್ಬರಿಂದ ತಮ್ಮ ತೋಟದಿಂದ ಅಡಕೆ ತರಲು ಎತ್ತಿನ ಗಾಡಿ ಕೇಳಿ ಪಡೆದುಕೊಂಡಿದ್ದರು. ಆದರೆ, ಅವರನ್ನು ಮಾತನಾಡಿಸಿದ್ದೂ ಅಲ್ಲದೆ ಎತ್ತು-ಗಾಡಿ ಎರಡನ್ನೂ ತೆಗೆದುಕೊಂಡಿದ್ದೀಯ ಗ್ರಾಮದ ನಿಯಮ ಮೀರಿರುವುದರಿಂದ ಸಾವಿರದ ಒಂದುನೂರ ಒಂದು ರೂ. ದಂಡ ಕಟ್ಟಿ ತಪ್ಪೊಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಆದರೆ, ಮಾಡದ ತಪ್ಪಿಗೆ ನಾನೇಕೆ ದಂಡ ಕಟ್ಟಲಿ ಕಾನೂನು ರೀತಿ ಹೋರಾಡುತ್ತೇನೆಯೇ ವಿನಃ ಮಹಾತ್ಮರು ತಮ್ಮ ಪ್ರಾಣ ಅರ್ಪಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಹೇಳಿದ್ದೇ ಬಹಿಷ್ಕಾರಕ್ಕೆ ಕಾರಣವಾಗಿದೆ.
* ಈ ಗ್ರಾಮದಲ್ಲಿ ಬಹಿಷ್ಕಾರಕ್ಕೊಳಗಾದವರಿಗೆ ವಿಧಿಸುವ ಷರತ್ತುಗಳು:
೧)ಗ್ರಾಮದಲ್ಲಿ ನೀರು ತೆಗೆದುಕೊಳ್ಳುವಂತಿಲ್ಲ.
೨)ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ಖರೀದಿಸುವಂತಿಲ್ಲ.
೩) ಯಾರ ಮನೆಯಲ್ಲಿಯೂ ಕೂಡ ಉಪ್ಪು ನೀರು ನೀಡುವಂತಿಲ್ಲ.
೪) ಬಹಿಷ್ಕಾರಕ್ಕೆ ಒಳಪಟ್ಟ ಕುಟುಂಬಗಳನ್ನು ಮಾತನಾಡಿಸಿದರೂ 1101 ರೂ. ದಂಡ ವಿಧಿಸಲಾಗುತ್ತದೆ.
* ಮನೆಗೆ ಬೆಂಕಿ ಬಿದ್ದಾಗಲೂ ಗ್ರಾಮಸ್ಥರ ಅಸಹಕಾರ : ಬಹಿಷ್ಕಾರಕ್ಕೆ ಒಳಗಾಗಿರುವ ಪುಟ್ಟಸ್ವಾಮಿಯವರ ಮನೆಗೆ ೭ ವರ್ಷಗಳ ಹಿಂದೆ ಆಕಸ್ಮಿಕವಾಗಿ ತಗುಲಿದ ಬೆಂಕಿ ಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಾಗಲೂ ಕೂಡಾ ಗ್ರಾಮಸ್ಥರು ಯಾರೂ ಸಹ ಇವರ ಸಹಕಾರಕ್ಕೆ ಧಾವಿಸಿಲ್ಲ. ಆ ವೇಳೆ ಪಕ್ಕದ ಜಮೀನಿಗೆ ಶುಂಠಿ ಕೆಲಸಕ್ಕೆಂದು ಬಂದಿದ್ದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೂಲಿ ಕಾರ್ಮಿಕರು ಬೆಂಕಿನದಿಸಲು ಸಹಾಯ ಮಾಡಿ ಮಾನವೀಯತೆ ಮೆರೆದರೂ ಕೂಡಾ ಗ್ರಾಮಸ್ಥರು ಮಾತ್ರ ಮನುಷ್ಯತ್ವವೇ ಇಲ್ಲದಂತೆ ವರ್ತಿಸಿದ್ದರು ಎಂಬುದನ್ನು ನೆನೆದು ಈ ಕುಟುಂಬ ಇಂದಿಗೂ ಕಂಬನಿ ಮಿಡಿಯುತ್ತಿದೆ.

* ಚುನಾವಣೆಯಲ್ಲಿ ಮತ ಕೇಳಲೂ ಹಿಂದೇಟು :
ರಾಗಿ ಬಸವನಹಳ್ಳಿಯಲ್ಲಿ ಒಮ್ಮೆ ಬಹಿಷ್ಕಾರಕ್ಕೆ ಒಳಗಾದರೆ ಆ ವ್ಯಕ್ತಿಯನ್ನು ಮಾತನಾಡಿಸುವುದಿರಲಿ ಚುನಾವಣೆ ಸಂದರ್ಭದಲ್ಲಿ ಮತ ಕೇಳಲೂ ಸಹ ಹೊಂದೇಟು ಹಾಕುತ್ತಾರೆ. ಸದ್ಯ ಒಂದೂವರೆ ದಶಕದಿಂದ ಬಹಿಷ್ಕಾರಕ್ಕೊಳಗಾಗಿರುವ ಪುಟ್ಟಸ್ವಾಮಿ ಮನೆ ಯಾರೂ ಮತ ಕೇಳಲು ಬರುವುದಿಲ್ಲ. ಬಂದರೆ ಅವರಿಗೆ ಇಡೀ ಊರಲ್ಲಿ ಯಾರೂ ಕೂಡಾ ಮತ ಹಾಕಲ್ಲ. ನಿಜವಾಗಿಯೂ ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವೇ ಎಂದು ಹೇಳಬಹುದಾಗಿದೆ.
ಬಹಿಷ್ಕಾರಕ್ಕೊಳಗಾಗಿದ್ದವರ ಬಳಿ ಎತ್ತು, ಗಾಡಿ ಪಡೆದುಕೊಂಡಿದ್ದಕ್ಕೆ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಆ ವೇಳೆ ದಂಡ ಕಟ್ಟಿ ತಪ್ಪೊಪ್ಪಿಕೊಳ್ಳುವಂತೆ ಹೇಳಿದರು. ಆದರೆ ಸಾವಿರಾರು ಮಹಾತ್ಮರ ತ್ಯಾಗ, ಬಲಿದಾನದ ಸಂಕೇತವಾಗಿರುವ ಸ್ವತಂತ್ರವನ್ನು ನಾನು ಇವರಿಗೆ ಪಣಕ್ಕಿಟ್ಟರೆ. ಸ್ವತಂತ್ರಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ಕಾನೂನು ಹೋರಾಟ ಮಾಡುತ್ತಿದ್ದೇನೆ. ಊರಲ್ಲಿ ನನ್ನನ್ನು ಮಾತನಾಡಿಸಿದ ಅದೇಷ್ಟೋ ಮಂದಿ ದಂಡ ಕಟ್ಟಿ ಇಂದಿಗೂ ದಾಸ್ಯಕ್ಕೊಳಗಾಗಿ ಬದುಕುತ್ತಿದ್ದಾರೆ. ಪ್ರಾಣಿಗಳಿಗಾದರೂ ಒಂದು ದಯೆ ಎನ್ನುವುದು ಇದೆ. ನಾನು ಆ ಪ್ರಾಣಿಗಳಿಗಿಂತಲೂ ಕಡೆಯೇ? ಅಥವಾ ಈ ಊರಲ್ಲಿ ಮಾನವುಯತೆಯೇ ಇಲ್ಲವೇ? ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಇನ್ನೂ ಹದಿನಾಲ್ಕು ವರ್ಷ ಇದೇ ರೀತಿ ವನವಾಸ ಅನುಭವಿಸಿ ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡುತ್ತೇನೆಯೇ ವಿನಃ ಮಾಡದ ತಪ್ಪನ್ನು ಒಪ್ಪಿಕೊಳ್ಳಲ್ಲ, ಗಾಂಧೀಜಿ ಕೊಟ್ಟ ಸ್ವಾತಂತ್ರ್ಯವನ್ನು ಒತ್ತೆಯಿಡಲ್ಲ.
– ಪುಟ್ಟಸ್ವಾಮಿ, ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿ
ಯೋಗೀಶ್ ಕಾಮೇನಹಳ್ಳಿ
Chikmagalur
ಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ ನಡೆಯುತ್ತಿರುವುದರಿಂದ, ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ಪ್ರವಾಸಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ದೇವಸ್ಥಾನದ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಭಾರಿ ವಾಹನಗಳ ಮೂಲಕ ಸಾಗಿಸುತ್ತಿರುವುದರಿಂದ ಮತ್ತು ಈ ರಸ್ತೆ ಕಿರಿದಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಫೆ.7 ರಿಂದ ಮಾರ್ಚ್ 5, 2026ರ ವರೆಗೆ ಪ್ರವಾಸಿ ಜೀಪ್‌ಗಳು ಹಾಗೂ ಸಾರ್ವಜನಿಕ ವಾಹನಗಳ ಓಡಾಟವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಿಷೇಧಿಸಿದೆ. ಆದ್ದರಿಂದ, ಪ್ರವಾಸಿಗರು ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ನಡೆದುಕೊಂಡು ಹೋಗುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Chikmagalur
ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿ.ಟಿ.ರವಿ
ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಔಷಧಿಗಳ ತೀವ್ರ ಕೊರತೆಯ ಕುರಿತು ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಎಂಎಲ್‌ಸಿ ಡಾ.ಸಿ.ಟಿ. ರವಿ ಅವರು ಇಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯ ದುಸ್ಥಿತಿ ಕಂಡು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಿ.ಟಿ. ರವಿ ಅವರಿಗೆ ರೋಗಿಗಳು ಮತ್ತು ಅವರ ಸಂಬಂಧಿಕರು ತಮ್ಮ ಸಂಕಷ್ಟಗಳನ್ನು ಬಿಚ್ಚಿಟ್ಟರು. “ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಎಂದು ಬಂದರೆ, ಇಲ್ಲಿನ ವೈದ್ಯರು ಔಷಧಿಗಳನ್ನು ಹೊರಗಿನಿಂದ ತರಲು ಚೀಟಿ ಬರೆದುಕೊಡುತ್ತಿದ್ದಾರೆ. ಬಡವರು ಹಣಕ್ಕೆ ಎಲ್ಲಿ ಹೋಗಬೇಕು?” ಎಂದು ರೋಗಿಗಳ ಸಂಬಂಧಿಕರು ಕಣ್ಣೀರಿಟ್ಟರು. ಆಸ್ಪತ್ರೆಯ ಅವ್ಯವಸ್ಥೆ ಕಂಡು ಸಿ.ಟಿ. ರವಿ ಅವರು ಜಿಲ್ಲಾ ಸರ್ಜನ್ ಹಾಗೂ ವೈದ್ಯರ ವಿರುದ್ಧ ಸ್ಥಳದಲ್ಲೇ ಗರಂ ಆದರು.

ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಿಲ್ಲಾ ಸರ್ಜನ್ ಅವರನ್ನು ತರಾಟೆಗೆ ತೆಗೆದುಕೊಂಡ ಸಿ.ಟಿ. ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಡವರ ಬದುಕು ದುಸ್ತರ
“ಸರ್ಕಾರಿ ಆಸ್ಪತ್ರೆಗೆ ಬರುವವರು ಅಸಹಾಯಕರು ಮತ್ತು ಬಡವರು. ಇಲ್ಲಿಯೇ ಔಷಧಿ ಇಲ್ಲದಿದ್ದರೆ ಅವರು ಎಲ್ಲಿಂದ ಹಣ ತರಬೇಕು? ರಾಜ್ಯದಾದ್ಯಂತ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಕಾಡುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ಯತೆ ಯಾವುದು?: “ನಿಮಗೆ ಸಚಿವ ಸಂಪುಟದ ಸ್ಥಾನಮಾನ ನೀಡುವುದು ಮೊದಲ ಆದ್ಯತೆಯೋ ಅಥವಾ ಜೀವ ಉಳಿಸಿಕೊಳ್ಳಲು ಬರುವ ಬಡವರಿಗೆ ಚಿಕಿತ್ಸೆ ನೀಡುವುದು ಆದ್ಯತೆಯೋ?” ಎಂದು ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದರು.
ಡಯಾಲಿಸಿಸ್ ಸಮಸ್ಯೆ: ಡಯಾಲಿಸಿಸ್ ಘಟಕದ ಟೆಂಡರ್ ಪಡೆದ ಖಾಸಗಿ ಕಂಪನಿಗೆ ಕಳೆದ 10 ತಿಂಗಳಿನಿಂದ ಸರ್ಕಾರ ಒಂದು ರೂಪಾಯಿ ಹಣವನ್ನೂ ನೀಡಿಲ್ಲ. ಇದರಿಂದಾಗಿ ರೋಗಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತುರ್ತು ಕ್ರಮಕ್ಕೆ ಆಗ್ರಹ: ಔಷಧಿಗಳ ಸರಬರಾಜು ಸಂಬಂಧ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಬಡ ರೋಗಿಗಳಿಗೆ ಅಗತ್ಯವಿರುವ ಔಷಧಿ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದರು.
Chikmagalur
ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌತಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ.
ದಾಳಿಗೆ ಒಳಗಾದ ಇಬ್ಬರೂ ಮಹಿಳೆಯರು ಅಸ್ಸಾಂ ಮೂಲದ ಕಾರ್ಮಿಕರಾಗಿದ್ದು, ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದೆ.

ದಾಳಿಯಿಂದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಮೂಡಿಗೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದ್ದು, ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಈ ಘಟನೆ ಮೂಡಿಗೆರೆ ತಾಲೂಕಿನಲ್ಲಿ ಮತ್ತೆ ಚಿರತೆ ಭೀತಿಯನ್ನು ಹೆಚ್ಚಿಸಿದ್ದು, ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
-
Mysore22 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Hassan12 hours agoಜನತೆಯ ಪ್ರೀತಿಗೆ ಮನಸೋತ ಡಿಸಿ ಕೆ.ಎಸ್. ಲತಾ ಕುಮಾರಿ
-
Mysore12 hours ago5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಚಾಲನೆ: ರಸ್ತೆ ಡಾಂಬರೀಕರಣ_ಬಾಗೂರು ಅಣೆಕಟ್ಟು ಅಭಿವೃದ್ಧಿಗೆ ಗುದ್ದಲಿ ಪೂಜೆ
-
Mandya16 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
Kodagu15 hours agoಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಬಿ.ಬಿ.ಹೇಮಲತಾ
-
Chikmagalur15 hours agoಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
-
Hassan14 hours agoಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
-
National15 hours agoಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
