Politics
ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಕಾಂಗ್ರೆಸ್ ಮಾನ್ಯತೆ, ಬಾಲಕೃಷ್ಣ ಶಾಸಕತ್ವ ರದ್ದು ಮಾಡಬೇಕು ಎಂದು ಮನವಿ
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದ ನಿಖಿಲ್ ನೇತೃತ್ವದ ನಿಯೋಗ
ಬೆಂಗಳೂರು: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ವಿರುದ್ಧ ದೂರು ನೀಡಿತು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ಅವರಿಗೆ ಮತ ನೀಡದಿದ್ದರೆ 5 ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಲು ತಮ್ಮ ಪಕ್ಷದೊಂದಿಗೆ ಚರ್ಚಿಸುತ್ತೇನೆ ಎಂಬುದಾಗಿ ಅವರು ಹೇಳಿಕೆ ನೀಡಿರುತ್ತಾರೆ. ಇದು ಸಾರ್ವಜನಿಕರಿಗೆ ಬೆದರಿಕೆ ಮತ್ತು ಅವರ ಮತದಾನದ ನಡವಳಿಕೆಯನ್ನು ಭ್ರಷ್ಟಗೊಳಿಸುವ ಸ್ಪಷ್ಟ ಪ್ರಕರಣವಾಗಿದೆ ಎಂದು ಜೆಡಿಎಸ್ ತನ್ನ ದೂರಿನಲ್ಲಿ ತಿಳಿಸಿದೆ.

ಜನತಾ ಪ್ರಾತಿನಿಧ್ಯ ಕಾಯಿದೆಯ ಪ್ರಕಾರ ಭಾರತೀಯ ಸಂವಿಧಾನದ ನಿಬಂಧನೆಗಳನ್ನು ಅಥವಾ 1951ರ ಜನತಾ ಪ್ರಾತಿನಿಧ್ಯ ಕಾಯಿದೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಆ ರಾಜಕೀಯ ಪಕ್ಷದ ಮಾನ್ಯತೆ ರದ್ದು ಮಾಡುವ ಅಧಿಕಾರವನ್ನು ಚುನಾವಣಾ ಆಯೋಗವು ಹೊಂದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಬಾಲಕೃಷ್ಣ ಅವರು ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ದೂರು ಸಲ್ಲಿಸಿದ ನಂತರ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದರು.
ಅಲ್ಲದೆ, ಎಚ್. ಸಿ.ಬಾಲಕೃಷ್ಣ ಅವರ ಹೇಳಿಕೆಯು ನಮ್ಮ ಸಂವಿಧಾನ ಮತ್ತು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ನಾನು ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ನ ಮಾನ್ಯತೆಯನ್ನು ರದ್ದು ಮಾಡಲು ಒತ್ತಾಯಿಸಿದ್ದೇವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರು ಸೇರಿದಂತೆ ಪಕ್ಷದ ಉನ್ನತ ನಾಯಕತ್ವದ ಪೂರ್ವಾನುಮತಿ ಇಲ್ಲದೆ ಅವರು ಯಾವುದೇ ಹೇಳಿಕೆ ನೀಡಿರುವ ಸಾಧ್ಯತೆ ಇಲ್ಲ. ಇಂತಹ ವರ್ತನೆಯನ್ನು ಜೆಡಿಎಸ್ ಮತ್ತು ಕರ್ನಾಟಕದ ಜನತೆ ಸಹಿಸುವುದಿಲ್ಲ ಎಂದು ಅವರು ಆರೋಪ ಮಾಡಿದರು.

ಕಾಂಗ್ರೆಸ್, ದೇಶ ವಿರೋಧಿ ಮತ್ತು ಕರ್ನಾಟಕ ವಿರೋಧಿ ಪಕ್ಷ. ಸಾರ್ವಜನಿಕರು ಕಾಂಗ್ರೆಸ್ಸಿಗರ ನಿಜವಾದ ಗುಣವನ್ನು ಅರ್ಥಮಾಡಿಕೊಂಡಿದ್ದಾರೆ, ಹಾಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಲು ಹೋಗುವುದಿಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ಈಗಾಗಲೇ ಅರಿವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಪಿಎಂ ಮೋದಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸುವುದು ಖಚಿತ. ಹತಾಶೆಯಿಂದ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನಿಖಿಲ್ ಅವರು ಹೇಳಿದರು.
ಸಂಸದ ಡಿ.ಕೆ.ಸುರೇಶ್ ಅವರು ಹೇಳಿದ್ದನ್ನು ನೀವು ಖಂಡಿತಾ ಕೇಳಿರಬಹುದು. ಇದು ದೇಶದ ಸಾರ್ವಭೌಮತೆಗೆ ವಿರುದ್ಧವಾಗಿದೆ ಮತ್ತು ಅವರನ್ನು ಸುಳ್ಳು ಸುದ್ದಿ ಹರಡಿದ ಹಿನ್ನೆಲೆಯಲ್ಲಿ ದೇಶದ ಕಾನೂನು ವ್ಯಾಪ್ತಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಬಿಜೆಪಿಯ ಕೇಂದ್ರ ನಾಯಕತ್ವವು ಪಕ್ಷದ ಕೇಂದ್ರ ಮುಖಂಡರೊಂದಿಗೆ ಮತ್ತು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌ಡಿ ದೇವೇಗೌಡರನ್ನು ಸಂಪರ್ಕಿಸಿದ ನಂತರ ಜೆಡಿಎಸ್, ಎನ್‌ಡಿಎ ಮೈತ್ರಿಯಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಕರ್ನಾಟಕದಲ್ಲಿ ಸ್ಪರ್ಧಿಸಲಿವೆ. ಉತ್ತಮ ಸಾಧನೆಯನ್ನು ತೋರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಜಯ ಸಾಧಿಸಲಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಈಗಾಗಲೇ ಜಾರಿ ಮಾಡಿರುವ ಐದು ಗ್ಯಾರೆಂಟಿಗಳು ರದ್ದಾಗುತ್ತವೆ ಎಂದು ಚುನಾವಣೆಗೆ ಮೊದಲೇ ಜನತೆಗೆ ಬ್ಲ್ಯಾಕ್ ಮೇಲ್ ಮಾಡಿರುವ ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ವತಿಯಿಂದ ದೂರು ನೀಡಲಾಯಿತು.
ಶಾಸಕರಾದ ಬಾಲಕೃಷ್ಣ ಅವರ ಶಾಸಕತ್ವವನ್ನು ರದ್ದು ಮಾಡಬೇಕು ಹಾಗೂ ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನೂ ರದ್ದುಪಡಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳಾದ ಶ್ರೀ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಶಾಸಕರಾದ ಸುರೇಶ್ ಬಾಬು, ಕರೆಮ್ಮ ನಾಯಕ್, ಹೆಚ್.ಟಿ.ಮಂಜುನಾಥ, ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ, ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಎ.ಪಿ.ರಂಗನಾಥ್ ಸೇರಿ ಅನೇಕ ನಾಯಕರು ನಿಯೋಗದಲ್ಲಿ ಇದ್ದರು.

National
ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಕೇಂದ್ರಕ್ಕೆ ಎಚ್‌ಡಿಡಿ ಮನವಿ
ನವದೆಹಲಿ: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು, ರಾಜ್ಯಸಭೆಯಲ್ಲಿ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ದಯಮಾಡಿ ಪರಿಹರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಭಾಗವಹಿಸಿ ಮಾಜಿ ಪ್ರಧಾನಿಗಳು ಮಾತನಾಡಿದರು.

ಈ ವೇಳೆ ರಾಜ್ಯದ ಹಲವು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ರಾಜ್ಯಸಭೆಯ ಹಿರಿಯ ಸದಸ್ಯರೂ ಆಗಿರುವ ಮಾಜಿ ಪ್ರಧಾನಿಗಳು ಕೇಂದ್ರ ಸರ್ಕಾರಕ್ಕೆ ಕೈಮುಗಿದು ವಿನಂತಿ ಮಾಡಿಕೊಂಡಿದ್ದಾರೆ.
ಕರ್ನಾಟಕ ನಿರಂತರವಾಗಿ ನೆರೆ ರಾಜ್ಯಗಳ ಜೊತೆ ನೀರಾವರಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ನಾನು ಕೂಡ ನೀರಿಗಾಗಿ 65 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸದನದಲ್ಲಿ ನಾನು ನ್ಯಾಯಮಂಡಳಿಗಳು ನೀಡಿರುವ ತೀರ್ಪುಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಕರ್ನಾಟಕ ರಾಜ್ಯಕ್ಕೆ ನೀರಿನದ್ದೇ ಬಹುದೊಡ್ಡ ಬಿಕ್ಕಟ್ಟಾಗಿದೆ. ಒಂದೆಡೆ ತಮಿಳುನಾಡು, ಮತ್ತೊಂದೆಡೆಯಲ್ಲಿ ಆಂಧ್ರಪ್ರದೇಶ, ಇನ್ನೊಂದು ಕಡೆಯಲ್ಲಿ ಗೋವಾದಿಂದ ತೊಂದರೆ ಎದುರಿಸುತ್ತಿದೆ. ನಾನು ಜೀವನದ ಕೊನೆಗಾಲದಲ್ಲಿ ಇದ್ದೇನೆ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರ ಸರ್ಕಾರ ಈ ಬಿಕ್ಕಟ್ಟಿಗೆ ಪರಿಹಾರ ನೀಡಬೇಕು. ನಾನು ನಿಮ್ಮ (ಎನ್‌ಡಿಎ) ಜೊತೆಯಲ್ಲಿಯೇ ಇರುತ್ತೇನೆ. ನನ್ನ ಮಗ ನಿಮ್ಮ ಸಂಪುಟದಲ್ಲಿ ಇದ್ದಾನೆ. ನಾವು ಮುಂದೆಯೂ ನಿಮ್ಮ ಜೊತೆಗೇ ಇರುತ್ತೇವೆ. ಮೈತ್ರಿಕೂಟ ಬದಲಾವಣೆ ಮಾಡುವ ಯಾವ ಪ್ರಶ್ನೆಯೇ ಇಲ್ಲ. ರಾಜ್ಯದ ಜನರಿಗೆ ನ್ಯಾಯ ಒದಗಿಸಿ ಎಂಬುದಷ್ಟೇ ನನ್ನ ಏಕೈಕ ಮನವಿ ಎಂದು ಹೇಳಿದ್ದಾರೆ.
ಇದೇ ವೇಳೆ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕ ಜೊತೆ ಯಶಸ್ವಿಯಾಗಿ ವ್ಯಾಪಾರ ಒಪ್ಪಂದ ಮಾಡಿಕೊಂಡ ಭಾರತದ ರಾಜತಾಂತ್ರಿಕ ಜಾಣ್ಮೆಯನ್ನು ಕೊಂಡಾಡಿದ ಮಾಜಿ ಪ್ರಧಾನಿಗಳು, ಇದಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಬಗ್ಗೆ ನಾನು ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ ಎಂಬ ಅಂಶವನ್ನು ಉಲ್ಲೇಖ ಮಾಡಿದ್ದಾರೆ.
ಮೋದಿ ಅವರನ್ನು ವಿನಾಕಾರಣ ಟೀಕೆ ಮಾಡುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಿದ್ದು, ಜನರ ಆದಾಯ ಹೆಚ್ಚಳ ಆಗುತ್ತಿದೆ ಹಾಗೂ ರೈತಪರವಾಗಿ ಈ ಸರ್ಕಾರ ಕೆಲಸ ಮಾಡುತ್ತಿದೆ. 2047ಕ್ಕೆ ಭಾರತವು ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳಿದ್ದಾರೆ.
Politics
ಆಡಳಿತ- ವಿಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾದ ವಿಧಾನ ಪರಿಷತ್ ಕಲಾಪ
ಬೆಂಗಳೂರು: ವಿಧಾನ ಪರಿಷತ್ ಕಲಾಪ ಇಂದು ಸಹ ಆಡಳಿತ ಮತ್ತು ವಿರೋಧ ಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾಗಿದ್ದು, ಬಿಜೆಪಿ ಎಂಎಲ್‌ಸಿ ಡಾ. ಸಿ.ಟಿ. ರವಿ ವಿಷಾದ ವ್ಯಕ್ತಪಡಿಸಬೇಕು ಎಂಬ ವಿಚಾರ ಇಂದು ಕಲಾಪದಲ್ಲಿ ಸದ್ದು ಮಾಡಿತು. ಹಾಗಾಗಿ ಆಡಳಿತ-ವಿಪಕ್ಷಗಳ ನಡುವೆ ಗಲಾಟೆ ಆಗಿ ಕಲಾಪ ಮುಂದೂಡುವ ಪರಿಸ್ಥಿತಿ ಬಂದಿತ್ತು.
ಕಲಾಪ ಆರಂಭ ಆದ ತಕ್ಷಣ ಶೂನ್ಯ ವೇಳೆ ಕಲಾಪಗಳು ನಡೆದವು. ಶೂನ್ಯ ವೇಳೆ ಮುಗಿದ ಕೂಡಲೇ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಮಾತಾಡಿ, ನಿನ್ನೆ ನಮ್ಮ ಸದಸ್ಯರು ಪ್ರಧಾನಿ ಮೋದಿ ಅವರ ಬಗ್ಗೆ ಮಾತಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅದರಂತೆ ಸಿ.ಟಿ.ರವಿ ಪಾಕಿಸ್ತಾನದ ನಾಲಿಗೆ ಅಂದಿದ್ದಕ್ಕೆ ವಿಷಾದ ವ್ಯಕ್ತಪಡಿಸಬೇಕೆಂದು ಆಗ್ರಹಿಸಿ ಸಭಾಪತಿಗಳ ಪೀಠ ಮನವಿ ಮಾಡಿದರು. ಆದರೆ ವಿಷಾದ ವ್ಯಕ್ತಪಡಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಲೀಂ ಅಹಮದ್ ಮಾತಿಗೆ ಸಚಿವ ಹೆಚ್.ಕೆ.ಪಾಟೀಲ್ ಸೇರಿ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿದರು. ಸಿಟಿ ರವಿ ವಿಷಾದ ವ್ಯಕ್ತಪಡಿಸಬೇಕು. ಇಲ್ಲ ಅಂದರೆ ಸದನದಿಂದ ಹೊರಗೆ ಹಾಕಬೇಕು ಅಂತ ಅಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಕೌಂಟರ್ ನೀಡಿದ ವಿಪಕ್ಷ ಸದಸ್ಯರು ಸಿ.ಟಿ.ರವಿ ಪರ ಬ್ಯಾಟಿಂಗ್ ಮಾಡಿದರು.
ಇನ್ನೂ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಸಿ.ಟಿ. ರವಿ ಯಾರ ಹೆಸರು ಉಲ್ಲೇಖ ಮಾಡಿಲ್ಲ. ರವಿ ಯಾವುದೇ ತಪ್ಪು ಮಾಡಿಲ್ಲ. ಅವರು ಕ್ಷಮೆ ಕೇಳೋ ಅವಶ್ಯಕತೆ ಇಲ್ಲ. ಕೇಳೋದು ಇಲ್ಲ ಎಂದು ತಿಳಿಸಿದರು.
ಛಲವಾದಿ ನಾರಾಯಣಸ್ವಾಮಿ ಮಾತಿಗೆ ಬಿಜೆಪಿ-ಜೆಡಿಎಸ್ ಸದಸ್ಯರು ಧ್ವನಿಗೂಡಿಸಿದರು. ಇದೇ ವೇಳೆ ಮಾತಾಡಿದ ಆಡಳಿತ-ವಿಪಕ್ಷಗಳ ನಡುವೆ ವಿಷಾದದ ಪಟ್ಟು ಜೋರಾಗಿ ನಡೆದು, ಮಾತಿನ ಸಮರಗಳು ನಡೆಯಿತು. ಸಭಾಪತಿ ಪೀಠವೂ ಯಾವುದೇ ನಿರ್ಧಾರ ಮಾಡಲು ಆಗದೇ ಕಲಾಪವನ್ನು ಊಟಕ್ಕೆ ಮುಂದೂಡಿಕೆ ಮಾಡಿದರು.
Hassan
2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
ಬೆಂಗಳೂರು/ಹಾಸನ: ಎತ್ತಿನಹೊಳೆ ನೀರನ್ನು 2027ರ ಅಂತ್ಯದೊಳಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಏತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳಲು ಈ ಮೂರು ಜಿಲ್ಲೆಗಳ ನೀರಿನ ಸಮಸ್ಯೆಗೆ ಪರಿಹಾರ ನೀಡುವುದೇ ಮುಖ್ಯ ಉದ್ದೇಶ. ಈ ಉದ್ದೇಶ ಈಡೇರಬೇಕಾದರೆ ಬಾಕಿ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಲಾಯಿತು.
ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಸಭೆಯಲ್ಲಿ ಕೋಲಾರ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾದ ಎಂಸಿ ಸುಧಾಕರ್ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ, “2027ರಲ್ಲಿ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ ಕುಡಿಯುವ ನೀರು ಹರಿಯುವುದನ್ನು ಖಚಿತಪಡಿಸುವಂತೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಲಾಯಿತು.

ಸಚಿವರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕರಾದ ರಾಜೇಶ್ ಅಮ್ಮಿನಭಾವಿ ಹಾಗೂ 3 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಓಗಳು, ಎಸ್ಎಲ್ಓ ಗಳು ಉಪಸ್ಥಿತರಿದ್ದು ಸಂಬಂಧಿತ ಎಲ್ಲಾ ಅಧಿಕಾರಿಗಳಿಗೂ ಅಗತ್ಯ ಸೂಚನೆ ನೀಡಲಾಗಿದೆ.
ಪ್ರಮುಖವಾಗಿ ಎತ್ತಿನಹೊಳೆ ನೀರು ತುಮಕೂರು ಜಿಲ್ಲೆಯ ಗಡಿಯವರೆಗೆ ತರಲು ಕಾಮಗಾರಿ ಪ್ರಗತಿಯಲ್ಲಿದೆ. ಮುಂದೆ ದೊಡ್ಡಬಳ್ಳಾಪುರದಿಂದ ಕುಂದಾಣ ಮಾರ್ಗವಾಗಿ ಒಂದು ಪೈಪ್ ಲೈನ್ ಕೋಲಾರ ಹಾಗೂ ಬಂಗಾರಪೇಟೆ ಕಡೆಗೆ, ಮತ್ತೊಂದು ಪೈಪ್ ಲೈನ್ ಚಿಂತಾಮಣಿ ಶ್ರೀನಿವಾಸಪುರ ಮಾರ್ಗವಾಗಿ ಮುಳಬಾಗಿಲು ಕಡೆಗೆ ಅಳವಡಿಸಲು ಕೂಡಲೇ ಕಾಮಗಾರಿ ಆರಂಭಿಸಲು ಸಭೆಯಲ್ಲಿ ಸೂಚಿಸಲಾಯಿತು.

ಈ ಪೈಪ್ ಲೈನ್‌ಗಳು ಒಟ್ಟು 261.90 ಕಿ.ಮೀ. ದೂರು ಅಳವಡಿಸಬೇಕಿದೆ. ಪೈಪ್ ಲೈನ್ ಅಳವಡಿಸಲು ಅಗತ್ಯವಿರುವ ಭೂ ಸ್ವಾಧೀನವನ್ನು ಕೂಡಲೇ ಮಾಡಲು ಭೂ ಸ್ವಾಧೀನ ಅಧಿಕಾರಿಗಳಿಗೆ ಸೂಚಿಸಲಾಯಿತು. ಭೂ ಸ್ವಾಧೀನ ಆದೇಶ ಹೊರಡಿಸಿದ ಭಾಗದಲ್ಲಿ ಪೈಪ್ ಲೈನ್ ಅಳವಡಿಕೆಯನ್ನು ಕೂಡಲೇ ಆರಂಭಿಸಲು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮುಂದುವರೆದು, ಕುಡಿಯುವ ನೀರು ಒದಗಿಸಬೇಕಾದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೀರು ಶುದ್ದೀಕರಣ ಘಟಕ ಹಾಗೂ ಗ್ರಾಮಗಳಿಗೆ ನೀರು ತಲುಪಿಸುವ ಪೈಪ್ ಲೈನ್ಗಳನ್ನು ಅಳವಡಿಸಲು ಅಂದಾಜು ಪಟ್ಟಿ ಹಾಗೂ ಪ್ರಸ್ತಾವನೆಗಳನ್ನು ಕೂಡಲೇ ತಯಾರಿಸಿ ಅನುಮೋದನೆಗೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಒಟ್ಟಾರೆ 2027ರ ಅಂತ್ಯಕ್ಕೆ ನೀರನ್ನು ಈ ಮೂರೂ ಜಿಲ್ಲೆಗಳಿಗೆ ತಲುಪಿಸಲು ಮತ್ತು ನೀರನ್ನು ಶುದ್ದೀಕರಿಸಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಂಬಂಧಿತ ಎಲ್ಲಾ ಇಲಾಖೆಗಳು ಸಮನ್ವಯದಿಂದ ಮತ್ತು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಯಿತು.
-
Politics20 hours agoಆಡಳಿತ- ವಿಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾದ ವಿಧಾನ ಪರಿಷತ್ ಕಲಾಪ
-
Special4 hours agoBSNL Recruitment 2026: ಬಿಎಸ್ಎನ್ಎಲ್ನಲ್ಲಿ ಭರ್ಜರಿ ನೇಮಕಾತಿ;ತಿಂಗಳಿಗೆ ₹90,000 ವರೆಗೆ ವೇತನ
-
National22 hours agoಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭೂಪೇಂದ್ರ ಯಾದವ್ಗೆ ಎಚ್ಡಿಕೆ ಮನವಿ
-
Hassan19 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
Hassan23 hours ago2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
-
Mysore23 minutes agoಪಾರಂಪರಿಕ ತಾಣದಲ್ಲಿ ಧೂಮಪಾನ: ಬಿಗ್ಬಾಸ್ ಸ್ಪರ್ಧಿ ರಜತ್ ವಿರುದ್ಧ ದೂರು
-
Chamarajanagar22 hours agoಬೆಳಗಿನ ವೇಳೆ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
-
Mysore4 hours agoಫುಟ್ಪಾತ್ ವ್ಯಾಪಾರಿಗಳಿಗೆ ನಂಜನಗೂಡು ನಗರಸಭೆ ಆಯುಕ್ತ ಎಂ. ಬಸವರಾಜು ಎಚ್ಚರಿಕೆ
