Connect with us

Mandya

ಮಂಡ್ಯ ಅಭ್ಯರ್ಥಿ ಆಯ್ಕೆ ಅಧಿಕಾರ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟ ಮಾಜಿ ಪ್ರಧಾನಿಗಳು

Published

on

ಮಂಡ್ಯ ಜೆಡಿಎಸ್ ನಾಯಕರ ಜತೆ ಮಹತ್ವದ ಚರ್ಚೆ ನಡೆಸಿದ ಹೆಚ್.ಡಿ.ದೇವೇಗೌಡರು

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ ಕುಮಾರಸ್ವಾಮಿ ಅವರು ಲೋಕಸಭೆಗೆ ಹೋಗೋದಿಲ್ಲ

ಬೆಂಗಳೂರು:  ಮಂಡ್ಯ ಲೋಕಸಭೆ ಚುನಾವಣೆ ಹಾಗೂ ಅಲ್ಲಿನ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪಕ್ಷ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ ಎಂದು ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ತಿಳಿಸಿದರು.

ತಮ್ಮ ನಿವಾಸದಲ್ಲಿ ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಇನ್ನಿತರೆ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಎರಡು ಚುನಾವಣೆಗಳಿಗೆ ಮಂಡ್ಯದಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂದು ನಾನು ಚರ್ಚೆ ಮಾಡಿದ್ದೇನೆ. ಎಲ್ಲಾ ನಾಯಕರ ಅಭಿಪ್ರಾಯ ಆಲಿಸಿದ್ದೇನೆ. ಈ ಬಗ್ಗೆ ಕುಮಾರಸ್ವಾಮಿ ಅವರು ಕೋರ್ ಕಮಿಟಿ ಹಾಗೂ ಪಕ್ಷದ ಎಲ್ಲಾ ನಾಯಕರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಮಾಡುತ್ತಾರೆ ಎಂದರು ಅವರು.

ಶಿಕ್ಷಕರ ಕ್ಷೇತ್ರದಲ್ಲಿ ಕೆ.ಟಿ.ಶ್ರೀಕಂಠೇಗೌಡರು ಹಾಗೂ ವಿವೇಕ್ ಅವರ ಹೆಸರುಗಳಿವೆ. ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುತ್ತದೆ. ಇನ್ನೊಬ್ಬರಿಗೆ ಬೇರೆ ಕಡೆ ಅವಕಾಶ ಕಲ್ಪಿಸಲಾಗುವುದು. ಇಬ್ಬರಲ್ಲಿ ಯಾರು ಎನ್ನುವ ನಿರ್ಧಾರವನ್ನು ಕುಮಾರಸ್ವಾಮಿ ಅವರಿಗೇ ಬಿಡುತ್ತೇನೆ. ಅವರು ಏನು ಹೇಳುತ್ತಾರೋ ಅದರಂತೆ ಇಬ್ಬರೂ ನಡೆದುಕೊಳ್ಳಬೇಕು ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಲೋಕಸಭೆಗೆ ಕುಮಾರಸ್ವಾಮಿ ನಿಲ್ಲೋದಿಲ್ಲ:

ಲೋಕಸಭೆಗೆ ಯಾರು ಅಭ್ಯರ್ಥಿ ಆಗಬೇಕು ಎನ್ನುವ ಬಗ್ಗೆ ಎಲ್ಲಾ ನಾಯಕರು ಬಹಳ ಸದ್ಭಾವನೆ ವ್ಯಕ್ತ ಮಾಡಿದ್ದಾರೆ. ನೀವು ನಿಲ್ಲಬೇಕು ಅಥವಾ ಕುಮಾರಸ್ವಾಮಿ ಅವರು ನಿಲ್ಲಬೇಕು ಇಲ್ಲವೇ ನಿಖಿಲ್ ನಿಲ್ಲಬೇಕು ಎಂದು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ, ನಾನು ನಿಲ್ಲುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನಿಖಿಲ್ ಅವರು ಕೂಡ ನಾನು ನಿಲ್ಲೋದಿಲ್ಲ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಶಾಸಕಾಂಗ ಪಕ್ಷದ ನಾಯಕರು. ಇಲ್ಲಿ ಅವರು ಸದನದ ಒಳಗೆ, ಹೊರಗೆ ಹೋರಾಟ ನಡೆಸಬೇಕಿದೆ. ಹೀಗಾಗಿ ಅವರು ಲೋಕಸಭೆಗೆ ಹೋಗುವೆ ಎಂದು ಹೇಳಲ್ಲ, ಇರುವ ವಾಸ್ತವಾಂಶವನ್ನು ಹೇಳುತ್ತೇನೆ ಎಂದು ಮಾಜಿ ಪ್ರಧಾನಿಗಳು ಸ್ಪಷ್ಟವಾಗಿ ಹೇಳಿದರು.


ಕುಮಾರಸ್ವಾಮಿ ಅವರು ಲೋಕಸಭೆಗೆ ಹೋಗುತ್ತಾರೆ ಎಂದು ವಿನಾಕಾರಣ ಊಹಾಪೋಹ ಸೃಷ್ಟಿ ಮಾಡಲಾಯಿತು. ಆದರೆ, ಅವರು ಎಂದೂ ಲೋಕಸಭೆಗೆ ಹೋಗುವೆ ಎಂದು ಹೇಳಿಲ್ಲ ಎಂದು ಅವರು ಒತ್ತಿ ಹೇಳಿದರು.

ಮೂರು ದಿನ ಮಂಡ್ಯದಲ್ಲಿ ಪ್ರವಾಸ:

ಪಕ್ಷ ಸಂಘನೆ ದೃಷ್ಟಿಯಿಂದ ಮುಂದಿನ ವಾರದಿಂದ ಮಂಡ್ಯ ಜಿಲ್ಲೆಯ ಎಲ್ಲಾ 8 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಆಗ ಎಲ್ಲಾ ಕಾರ್ಯಕರ್ತರು, ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಆಮೇಲೆ ಅಭ್ಯರ್ಥಿ ಬಗ್ಗೆ ನಮ್ಮ ಪಕ್ಷದ ನಾಯಕರೆಲ್ಲ ಸೇರಿ ಒಂದು ಅಭಿಪ್ರಾಯಕ್ಕೆ ಬರುತ್ತೇವೆ. ನಾವು ಎನ್ ಡಿಎ ಮೈತ್ರಿಕೂಟದಲ್ಲಿ ಇರುವುದರಿಂದ ನಮ್ಮ ನಿರ್ಧಾರವನ್ನು ಪ್ರಧಾನಿಗಳಾದ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸುತ್ತೇವೆ. ಆಮೇಲೆ ಕುಮಾರಸ್ವಾಮಿ ಅವರು ಅವರೆಲ್ಲರ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದು ಮಾಜಿ ಪ್ರಧಾನಿಗಳು ತಿಳಿಸಿದರು.

ಕ್ಷೇತ್ರ ಹಂಚಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಪ್ರಧಾನಿಗಳು, ಇಲ್ಲಿ ಜೆಡಿಎಸ್ – ಬಿಜೆಪಿ ಎನ್ನುವುದಲ್ಲ. ಎನ್ ಡಿಎ ಅಷ್ಟೇ ಮುಖ್ಯ. ಅಂತಿಮವಾಗಿ ಮೋದಿ ಅವರು, ಅಮಿತ್ ಶಾ, ನಡ್ಡಾ ಮತ್ತು ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಈಗಾಗಲೇ ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಅವರು ಎಲ್ಲಾ ಮಾಹಿತಿ ನೀಡಿದ್ದಾರೆ. ಬಹುಶಃ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತಾರೆ ಎಂದರು ಮಾಜಿ ಪ್ರಧಾನಿಗಳು.


ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಶಾಸಕರಾದ ಮಂಜುನಾಥ್, ಮಂಜೇಗೌಡ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠಗೌಡರು, ಜಿಲ್ಲಾಧ್ಯಕ್ಷ ರಮೇಶ್, ರಾಮಚಂದ್ರ ಹಾಗೂ ವಿವೇಕ್ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಕಾವೇರಿ ಉಳಿಸಿದ ದೇವೇಗೌಡರ ಮಗ ಹೊರಗಿನವರಾ: ಸಂಸದ ಪ್ರತಾಪ್‌ಸಿಂಹ ಕಿಡಿ

Published

on

ಮಂಡ್ಯ :  ಅಲಹಾಬಾದ್‌ನಲ್ಲಿ ಹುಟ್ಟಿದ ಇಂದಿರಾಗಾಂಧಿ ಚಿಕ್ಕಮಗಳೂರು, ಇಟಲಿಯಲ್ಲಿ ಹುಟ್ಟಿದ ಸೋನಿಯಾ ಗಾಂಧಿ ಬಳ್ಳಾರಿ, ದೆಹಲಿಯಲ್ಲಿ ಹುಟ್ಟಿದ ರಾಹುಲ್‌ಗಾಂಧಿ ವಯನಾಡಿಗೆ ಹೋಗಬಹುದು, ಮೈಸೂರಲ್ಲಿ ಹುಟ್ಟಿದ ಸಿದ್ದರಾಮಯ್ಯ ಬಾದಾಮಿಗೂ ಓಡಿ ಹೋಗಬಹುದು ಆದರೆ, ಕಾವೇರಿ ಉಳಿಸಿದ ದೇವೇಗೌಡರ ಮಗ ಹೊರಗಿನವರು ಆಗುತ್ತಾರಾ ಎಂದು ಸಂಸದ ಪ್ರತಾಪ್‌ಸಿಂಹ ಕಿಡಿಕಾರಿದರು.

ನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್‌ನ ಸಭಾಂಗಣದಲ್ಲಿ ಶುಕ್ರವಾರ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೂ.4 ರಂದು ಮೋದಿ ಮತ್ತೊಮ್ಮೆ ಪ್ರಧಾನಿ ಆಗಿ ಆಯ್ಕೆ ಆಗುತ್ತಾರೆ. ಕಾಂಗ್ರೆಸ್‌ನವರ ಸ್ಥಿತಿ 40 ಸ್ಥಾನ ದಾಟುವುದು ಕಷ್ಟವಾಗಿದೆ. ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಆಯ್ಕೆ ಆಗಬೇಕು. ಮೋದಿ ಸಂಪುಟದಲ್ಲಿ ಎಚ್ಡಿಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ, ಅಲಹಾಬಾದ್‌ನಲ್ಲಿ ಹುಟ್ಟಿದ ಇಂದಿರಾಗಾಂಧಿ ಚಿಕ್ಕಮಗಳೂರು, ಇಟಲಿಯಲ್ಲಿ ಹುಟ್ಟಿದ ಸೋನಿಯಾ ಗಾಂಧಿ ಬಳ್ಳಾರಿ, ದೆಹಲಿಯಲ್ಲಿ ಹುಟ್ಟಿದ ರಾಹುಲ್‌ಗಾಂಧಿ ವಯನಾಡಿಗೆ ಹೋಗಬಹುದು. ಮೈಸೂರಲ್ಲಿ ಹುಟ್ಟಿದ ಸಿದ್ದರಾಮಯ್ಯ ಬಾದಾಮಿಗೆ ಓಡಿ ಹೋಗಬಹುದು. ಕಾವೇರಿ ಉಳಿಸಿದ ದೇವೇಗೌಡರ ಮಗ ಹೊರಗಿನವರು ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಬಂತು ಬರಗಾಲ ಕಾಲಿಟ್ಟಿತು, ಕುಮಾರಸ್ವಾಮಿ, ಯಡಿಯೂರಪ್ಪ ಸಿಎಂ ಆದಾಗ ರಾಜ್ಯ ಸಮೃದ್ಧವಾಗಿತ್ತು. ಸಿದ್ದರಾಮಯ್ಯ ಸಿಎಂ ಆದಾಗ ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ಕಾವೇರಿ ವಿಚಾರದಲ್ಲಿ ಹಿನ್ನಡೆ ಆದಾಗ ಸಚಿವ ಚಲುವರಾಯಸ್ವಾಮಿ ಧ್ವನಿ ಎತ್ತಲಿಲ್ಲ. ಸ್ಟಾಲಿನ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಕಾವೇರಿ ವಿಚಾರದಲ್ಲಿ ಎದೆಗಾರಿಕೆ ತೋರಲಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ಮಂಡ್ಯ ರೈತರ ಹಿತ ಕಾಯುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರವಾಗಲಿ ಇಲ್ಲಿನ ಇದೇ ಪಕ್ಷದ ನಾಯಕರಾಗಲಿ ಮಾಡಲಿಲ್ಲ. ಆದರೆ, ಕಾವೇರಿ ವಿಚಾರದಲ್ಲಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು ದೇವೇಗೌಡರು, ಈಗ ಎಚ್‌ಡಿಡಿ ಮಗ ಅಭ್ಯರ್ಥಿ ಆಗಿದ್ದಾರೆ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಈಗಾಗಲೇ ಎಚ್‌ಡಿಕೆ ಅವರು 2 ಲಕ್ಷ ಮತದ ಅಂತರದಲ್ಲಿ ಗೆದ್ದಾಗಿದೆ ಎಂದು ಟಾಂಗ್‌ ನೀಡಿದರು.

ಜಿಲ್ಲೆಯಲ್ಲಿ ಅಂಬರೀಷ್ ನಂತರ ಮಂಡ್ಯಕ್ಕೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ. ದೇವೇಗೌಡರ ಇರಲಿಲ್ಲ ಎಂದರೆ ಚಲುವರಾಯಸ್ವಾಮಿ ಜಿಪಂ ಸದಸ್ಯ ಕೂಡ ಆಗುತ್ತಿರಲಿಲ್ಲ ನೆನಪಿರಲಿ? ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕುಮಾರಣ್ಣ ಗೆಲ್ಲಿಸಬೇಕು. ಹಾಗಾಗಿ ಮೈತ್ರಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರು ಹಲಗಲಿರುಳು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಜಾತಿಗಣತಿ ಅನ್ಯಾಯ ವಿರೋಧಿಸಿದರೂ ನೀವು ಸ್ಪಂದಿಸಲಿಲ್ಲ. ಅವತ್ತು ನಿಮಗೆ ಒಕ್ಕಲಿಗ ಸ್ವಾಮೀಜಿ ಬಗ್ಗೆ ಗೌರವ ಬರಲಿಲ್ವಾ? ಇವತ್ತು ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆಯಾ? ಕಾಂಗ್ರೆಸ್ 135 ಸೀಟ್ ಗೆಲ್ಲಲು ಕಾರಣರಾದ ಡಿ.ಕೆ.ಶಿವಕುಮಾರ್ ಅವರನ್ನು ಏಕೆ ಸಿಎಂ ಆಗಲು ಬಿಡಲಿಲ್ಲ. ಸಿದ್ದರಾಮಯ್ಯಗೆ ಒಕ್ಕಲಿಗರ ಮೇಲೆ ಪ್ರೀತಿ ಇಲ್ಲವೇ? ಜೆಡಿಎಸ್ ಪಕ್ಷ ಸಾಕಷ್ಟು ಒಕ್ಕಲಿಗರಿಗೆ ಅವಕಾಶ ಮಾಡಿಕೊಟ್ಟಿದೆ. ಒಕ್ಕಲಿಗ ನಾಯಕತ್ವ ಬೆಳೆಸಿದ್ದು ದೇವೇಗೌಡರು. ಇವರು ಸಮುದಾಯದ ಪ್ರಶ್ನಾತೀತ ನಾಯಕ. ಕಾವೇರಿ ಕಾಯಲು ಕುಮಾರಸ್ವಾಮಿ ಅವರನ್ನು ಕಳುಹಿಸೋಣ ಎಂದರು.

Continue Reading

Mandya

ಒಕ್ಕಲಿಗ ಸಮುದಾಯವನ್ನು ಆರನೇ ಸ್ಥಾನಕ್ಕೆ ನಿಲ್ಲಿಸಿದ ಸಿದ್ದರಾಮಯ್ಯ: ಆರ್‌.ಅಶೋಕ್‌ ಗುಡುಗು

Published

on

ಮಂಡ್ಯ :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಸಮೀಕ್ಷೆಯ ನೆಪದಲ್ಲಿ ಒಕ್ಕಲಿಗ ಸಮುದಾಯವನ್ನು ಆರನೇ ಸ್ಥಾನಕ್ಕೆ ತಂದು ನಿಲ್ಲಿಸಿದರು, ಕಾಂಗ್ರೆಸ್‌ಗೆ ಒಕ್ಕಲಿಗರ ಮತ ಕೇಳಲು ನೈತಿಕತೆ ಇಲ್ಲ ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಗುಡುಗಿದರು.

ನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್‌ನ ಸಭಾಂಗಣದಲ್ಲಿ ಶುಕ್ರವಾರ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗಾಯತ ಸಮುದಾಯದ ನಂತರ ಸ್ಥಾನದಲ್ಲಿರುವವರು ಒಕ್ಕಲಿಗರು. ಜಾತಿಗಣತಿ ವರದಿ ಸ್ವೀಕರಿಸಬೇಡಿ ಎಂದು ಹೇಳಿದರೂ ಅದನ್ನು ಮಾಧ್ಯಮಗಳಿಗೆ ನೀಡಿ, ಒಕ್ಕಲಿಗರನ್ನು ಆರನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಇದನ್ನು ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಡ್ಯದ ಜನ ಪ್ರಬುದ್ಧ ಮತದಾರರು. ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕ ಕುಳಿತುಕೊಳ್ಳುವವರು ಎಚ್.ಡಿ.ಕುಮಾರಸ್ವಾಮಿ ಅವರಾಗಬೇಕು. ಕಾವೇರಿ ಉಳಿವಿಗಾಗಿ ಎಚ್ಡಿಕೆಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಂಡ್ಯಕ್ಕೆ ಕುಮಾರಣ್ಣ, ಇಂಡಿಯಾಕ್ಕೆ ಮೋದಿ ಎಂಬ ಭಾವನೆ ಬರಬೇಕು. ಕಾವೇರಿ ಸಮಸ್ಯೆಯನ್ನು ಬಗೆಹರಿಸಲು ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು 2 ಲಕ್ಷ ಮತಗಳಿಂದ ಗೆಲ್ಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಒಬ್ಬ ಗುತ್ತಿಗೆದಾರ. ಅವರು ಗೆದ್ದರೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ, ಎಲ್ಲವೂ ವ್ಯಾಪಾರೀಕರಣವಾಗುತ್ತದೆ ಎಂದು ಆರೋಪಿಸಿದರು.

ಆದ್ದರಿಂದ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ. ಕುಮಾರಸ್ವಾಮಿ ಅವರಿಗೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲೂ ನಿಲ್ಲುವ ಅವಕಾಶವಿತ್ತು. ಆದರೆ, ಅವರು ಕಾವೇರಿ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಮಂಡ್ಯವನ್ನೇ ಆಯ್ಕೆ ಮಾಡಿಕೊಂಡು ಸ್ಪರ್ಧಿಸಿದ್ದಾರೆ, ಬಿಜೆಪಿ-ಜೆಡಿಎಸ್‌ ಸಮ್ಮಿಲನ ಹಾಲು-ಜೇನು ಇದ್ದಂತೆ. ಕಾಂಗ್ರೆಸ್-ಜೆಡಿಎಸ್‌ ಒಗ್ಗುವುದಿಲ್ಲ. ಕಾಂಗ್ರೆಸ್‌ನವರು ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ಒಡೆದೋಯ್ತು. ಇದಕ್ಕೆಲ್ಲ ಮೂಲ ಕಾರಣೀಭೂತರು ಸಿದ್ದರಾಮಯ್ಯ ಎಂದು ತಿವಿದರು.

ಸಿದ್ದರಾಮಯ್ಯ ಅವರು ಇಷ್ಟಕ್ಕೆ ಸುಮ್ಮನಾಗುವುದಿಲ್ಲ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೆ ಸರ್ಕಾರ ಉರುಳಿಸಿದರು, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆನ್ನಿಗೆ ಚೂರಿ ಹಾಕಿದವರು ಕಾಂಗ್ರೆಸ್‌ನವರು. ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಇಳಿಸಿದವರು ಯಾರು? ಇದೇ ಕಾಂಗ್ರೆಸ್‌ನವರು. ಕಾಂಗ್ರೆಸ್ ಈ ದೇಶಕ್ಕೆ ಮಾರಕ. ಕಾಂಗ್ರೆಸ್‌ಗೆ ಮತ ಹಾಕಿದರೆ ಭ್ರಷ್ಟಾಚಾರಕ್ಕೆ ಮತ ಹಾಕಿದಂತೆ ಎಂದರು.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಹಲವು ಅಭ್ಯರ್ಥಿಗಳು ಜೈಲಿನಲ್ಲಿದ್ದು ಬಂದವರೇ, ಅವರ ಮೇಲೆ ಇನ್ನೂ ಹಲವು ಪ್ರಕರಣಗಳು ಬಾಕಿ ಇವೆ. ಆದ್ದರಿಂದ ದೇಶ ಕಾಯಲು ಸಮರ್ಥ ಸೇನಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆ ನರೇಂದ್ರ ಮೋದಿ-ಸಿದ್ದರಾಮಯ್ಯ ನಡುವಿನ ಕದನವಲ್ಲ, ಮೋದಿ-ರಾಹುಲ್ಲ ನಡುವಿನ ಹೋರಾಟ. ಕಾಂಗ್ರೆಸ್‌ನವರು ‘ರಾಹುಲ್ಲ’ ಹೆಸರೇಳುವುದೇ ಇಲ್ಲ. ಅವರನ್ನು ಇನ್ನೂ ಮಗು ರೀತಿ ನೋಡುತ್ತಿದ್ದಾರೆ. ಅವರನ್ನು ಪ್ರಧಾನಿ ಎಂದು ಎಲ್ಲೂ ಹೇಳುತ್ತಿಲ್ಲ. ಇದನ್ನು ನಮ್ಮ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಜನತೆಗೆ ತಿಳಿಸಿ, ಮತ ಕೇಳಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಒಂದೇ ಒಂದು ಅಭಿವೃದ್ಧಿ ಕೆಲಸವು ರಾಜ್ಯದಲ್ಲಿ ನಡೆದಿಲ್ಲ. ಇವರು ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಬರಗಾಲ ಆವರಿಸುತ್ತದೆ. ಇಂದೂ ಸಹ ಬರಗಾಲ ಬಂದಿದೆ. ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ವಿದ್ಯುತ್ ಇಲ್ಲವಾಗಿದೆ. ಪ್ರತಿ ಕೆಲಸಕ್ಕೂ ಜನರೇಟರ್ ಆಶ್ರಯಿಸುವಂತಾಗಿದೆ ಎಂದು ಟೀಕಿಸಿದರು.

ಶ್ರೀರಾಮ ಮಂದಿರ ಕಟ್ಟಿದಾಕ್ಷಣ ಅವಹೇಳನಕಾರಿಯಾಗಿ ಮಾತನಾಡಿದರು. ಕೆರಗೋಡಿನಲ್ಲಿ ಹನುಮಧ್ವಜ ಹಾರಿಸಲು ಬಿಡಲಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿಸಿದರು. ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆಯಿತು. ಇದೆಲ್ಲ ನಡೆದದ್ದು ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ ನಂತರ ಎಂಬುದನ್ನು ಮತದಾರರು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು.

Continue Reading

Mandya

ದ್ವೇಷಕ್ಕೆ ಒರ್ವ ಬಲಿ, ಮತ್ತೊರ್ವನಿಗೆ ಗಂಭೀರ ಗಾಯ

Published

on

ಯುಗಾದಿ ಹಬ್ಬದಂದೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಮಂಡ್ಯ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಯುಗಾದಿ ಹಬ್ಬದ ದಿನದಂದೇ ನಗರದ ಸ್ವರ್ಣಸಂದ್ರದಲ್ಲಿ ಮಂಗಳವಾರ ನಡೆದಿದಿದ್ದು, ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ.

ನಗರದ ಸ್ವರ್ಣಸಂದ್ರ ಬಡಾವಣೆಯ ಅಕ್ಷಯ್(24) ಹತ್ಯೆಯಾದ ಯುವಕನಾಗಿದ್ದು, ಈತನ ಸ್ನೇಹಿತ ಹೇಮಂತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವರ್ಷ ಹಣದ ವಿಚಾರವಾಗಿ ಅಕ್ಷಯ್ ಹಾಗೂ ಸಾಹುಕಾರ್ ಭರತ್ ಮಧ್ಯೆ ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದ್ದು, ಆ ಸಂದರ್ಭದಲ್ಲಿ ಅಕ್ಷಯ್ ಸಾಹುಕಾರ್ ಭರತ್ ಮತ್ತು ಪ್ರಮೋದ್ ಮೇಲೆ ಹಲ್ಲೆ ನಡೆಸಿದ್ದ. ಈ ದ್ವೇಷದ ಹಿನ್ನಲೆಯಲ್ಲಿ ಸಾಹುಕಾರ್ ಭರತ್ ಹಾಗೂ ಪ್ರಮೋದ್ ಅಲಿಯಾಸ್ ಕಾಡು ಎಂಬವರು ಅಕ್ಷಯನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪೋನ್ ಮಾಡಿ ಕರೆಸಿಕೊಂಡು ಸ್ವರ್ಣಸಂದ್ರದ ಬಡಾವಣೆಯ ಅರಳಿಕಟ್ಟೆ ಮುಂಭಾಗ ಅಕ್ಷಯ್ ಹಾಗೂ ಆತನ ಸ್ನೇಹಿತ ಹೇಮಂತನ ಮೇಲೆ ಮಚ್ಚು ಲಾಂಗ್‌ಗಳಿಂದ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಕ್ಷಯ್ ಸ್ಥಳದಲ್ಲಿಯೇ ಮೃತಪಟ್ಟರೆ, ಹೇಮಂತ ಗಂಭೀರವಾಗಿ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಳೆದ ವರ್ಷ ಚೀಟಿ ವ್ಯವಹಾರದ ಹಿನ್ನೆಲೆಯಲ್ಲಿ ಅಕ್ಷಯ್ ಹಾಗೂ ಸಾಹುಕಾರ್ ಭರತ್ ಮಧ್ಯೆ ಒಂದು ವರ್ಷದ ಹಿಂದೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಅಕ್ಷಯ್ ಭರತ್ ಮೇಲೆ ಹಲ್ಲೆ ಮಾಡಿದ್ದ. ಈ ಬಗ್ಗೆ ಮಂಡ್ಯ ಪಶ್ಚಿಮ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಚೀಟಿ ಹಣಕಾಸಿನ ವಿಚಾರದಲ್ಲಿದ್ದ ದ್ವೇಷವೇ ಅಕ್ಷಯ್ ಹತ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಸಬ್‌ಇನ್‌ಸ್ಪೆಕ್ಟರ್ ಶೇಷಾದ್ರಿ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!