Mandya
ಪರಿವರ್ತನೆ ಹೋರಾಟಗಳು ಹೆಚ್ಚು ನಡೆಯಲಿ: ಎಚ್.ಎಂ.ರೇವಣ್ಣ

ಮಂಡ್ಯ: ಯುವಜನರ ಕೆಚ್ಚಿನ ಹೊರಾಟಗಳಿಂದಲೇ ಸಮಾಜದಲ್ಲಿ ಅನೇಕ ಬದಲಾವಣೆಗಳಾಗುತ್ತವೆ, ಸಮಾಜದಲ್ಲಿ ಅಂತಹ ಪರಿವರ್ತನೆಯಾಗುವ ಹೋರಾಟಗಳು ಹೆಚ್ಚು ನಡೆಯಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಕರೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ಜನಪರ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ, ವಿವೇಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉತ್ಕೃಷ್ಟವಾಗಿದೆ. ಜೈನ ಸಂಸ್ಕೃತಿ, ಬಸವ ಸಂಸ್ಕೃತಿ, ದಲಿತ ಸಾಹಿತ್ಯವನ್ನೂ ಒಳಗೊಂಡಿದೆ. ಇಂತಹ ಭಾಷೆಯನ್ನು ಮಾತನಾಡಲು ಹಿಂಜರಿಯಬಾರದು. ಭಾರತದ ಇಡೀ ರಾಜಕೀಯ ಚಿತ್ರಣ ಬದಲಿಸಿದ ಜಯಪ್ರಕಾಶ್ ನಾರಾಯಣ್, ಗಾಂಧಿಜೀಯವರು, ಸ್ವಾಮಿ ವಿವೇಕಾನಂದರು ಯುವಜನರ ಮೂಲಕ ಚಳವಳಿಗೆ ಕರೆ ನೀಡಿ ಯಶಸ್ವಿಯಾದವರು. ಯುವಜನರ ಹೋರಾಟದಿಂದ ಸರ್ಕಾರಗಳು ಉರುಳಿ ಬಿದ್ದಿರುವ ಇತಿಹಾಸವಿದೆ. ಯವಶಕ್ತಿ ದೇಶದ ಮುಖ್ಯ ಶಕ್ತಿ ಎಂದು ವಿವರಿಸಿದರು.
ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ಸಾಹಿತ್ಯ ಜನಸಾಮಾನ್ಯರ ದನಿಯಾಗಬೇಕು. ಅವರ ನೋವುಗಳ ಪ್ರತಿಫಲಿಸಬೇಕು. ಕನ್ನಡ ಚಟುವಟಿಕೆಗಳನ್ನು ನಿರ್ವಹಿಸಲು ಎಷ್ಟೇ ಸಂಘಟನೆಗಳಿದ್ದರೂ ಸಾಲದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ ಪ್ರಚಾರ ಮಾಡುವ ದಿಕ್ಕಿನಲ್ಲಿ, ಮತ್ತಷ್ಟು ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ ಸಂಘಟನೆಗಳು ಕೆಲಸ ಮಾಡಬೇಕು. ನಗರ ಕೇಂದ್ರಿತವಾಗಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಕೇಂದ್ರೀಕರಿಸಿ ಗ್ರಾಮೀಣ ಜನರಿಗೂ ಹೆಚ್ಚು ಉಣಬಡಿಸಬೇಕು ಎಂದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ದತ್ತೇಶ್ ಕುಮಾರ್ ಅವರು ಪ್ರಶಸ್ತಿ ನೀಡಿದರೆ. ಅಹಲ್ಯಾಭಾಯಿ ಹೋಳ್ಕರ್ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ಆರ್.ಪ್ರಭಾವತಿ ಅವರು ಪ್ರತಿಭಾ ಪುರಸ್ಕಾರ ವಿತರಣೆ ಮಾಡಿದರು.
ಸಾಹಿತಿ ಲಿಂಗದಹಳ್ಳಿ ಹಾಲಪ್ಪ, ಪರಿಷತ್ತಿನ ಗೌರವಾಧ್ಯಕ್ಷ ಡಿ.ರವಿ, ರಾಜ್ಯಾಧ್ಯಕ್ಷ ಎಂ.ಮಹೇಶ್ ಚಿಕ್ಕಲ್ಲೂರು, ಮುಖಂಡರಾದ ಎಂ.ಎಲ್.ಸುರೇಶ್, ಸಹ ಪ್ರಾಧ್ಯಾಪಕ ಆರ್.ನಾಗಭೂಷಣ ಭಾಗವಹಿಸಿದ್ದರು.
Mandya
ಕಡು ಬಡವರಿಗೂ ಗ್ಯಾರಂಟಿಗಳು ತಲುಪಿದಾಗ ಮಾತ್ರ ಯೋಜನೆಗಳು ಯಶಸ್ವಿಯಾದಂತೆ: ಚಿಕ್ಕಲಿಂಗಯ್ಯ

ಮಂಡ್ಯ : ಸರ್ಕಾರದ ಕನಸಿನ ಕೂಸಾದ ಗ್ಯಾರಂಟಿ ಯೋಜನೆಗಳು ರಾಜ್ಯದ ಕಡು ಬಡವರ ಮನೆಯನ್ನು ತಲುಪಿದಾಗ ಮಾತ್ರ ಯೋಜನೆ ಯಶಸ್ವಿಯಾದಂತೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಲು ಪ್ರಾಧಿಕಾರವು ಸಹ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಗ್ಯಾರಂಟಿ ಯೋಜನೆಯ ಪ್ರಮುಖ ಯೋಜನೆ ಗೃಹಲಕ್ಷಿ ಯೋಜನೆ, ಈ ಯೋಜನೆಯಿಂದ ರಾಜ್ಯದ ಅನೇಕ ಕುಟುಂಬಗಳು ಸಬಲವಾಗಿವೆ, ಜಿಲ್ಲೆಯಲ್ಲಿ ಶೇ 100 ರಷ್ಟು ಅರ್ಹ ಮಹಿಳೆಯರಿಗೆ ಯೋಜನೆಗಳನ್ನು ತಲುಪಿಸುವುದು ಅತಿ ಮುಖ್ಯ, ಈಗಾಗಲೇ ಡಿಸೆಂಬರ್ ಮಾಹೆಯವರೆಗೂ ಗೃಹ ಲಕ್ಷ್ಮಿ ಯೋಜನೆಯಡಿ ಅನುದಾನ ಮಂಜೂರು ಮಾಡಲಾಗಿದೆ ಹಾಗೂ ಡಿ ಬಿ ಟಿ ಯ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರೊಂದಿಗೆ ಚರ್ಚಿಸಿ ಕಾಲ ಕಾಲಕ್ಕೆ ಗೃಹಲಕ್ಷಿ ಹಣವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಅನ್ನ ಭಾಗ್ಯ ಯೋಜನೆಯಡಿ 7 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದೂ ಡಿಸೆಂಬರ್ ಮಾಹೆಯವರೆಗೆ ಒಟ್ಟು ರೂ. 402 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ, ಡಿಸೆಂಬರ್ ಮಾಹೆಗೆ ಸಂಬಂಧಿಸಿದಂತೆ ರೂ. 23.06 ಕೋಟಿ ಹಣವನ್ನು ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ, ಸರ್ಕಾರದ ನಿರ್ದೇಶನದಂತೆ ಫೆಬ್ರವರಿ ಮಾಹೆಯಿಂದ ಹಣದ ಬದಲು 15 ಕೆ.ಜಿ ಅಕ್ಕಿಯನ್ನೇ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲೆಡೆ ಈಗಾಗಲೇ ಫೆಬ್ರವರಿ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ವಿತರಿಸಲಾಗುತ್ತಿದೆ, ಪ್ರತಿ ಎರಡು ವರ್ಷಕ್ಕೊಮ್ಮೆ ತೂಕ ಮೌಲ್ಯ ಮಾಪನ ನಡೆಸಲಾಗುವುದು, ತೂಕದಲ್ಲಿ ವ್ಯತ್ಯಾಸ ಕಂಡು ಬಂದ ಅಂಗಡಿಯ ಮಾಲೀಕನ ಮೇಲೆ ಕ್ರಮ ಜರುಗಿಸಲಾಗುವುದು, ಜಿಲ್ಲೆಯಲ್ಲಿ ಅನೇಕ ಕಡೆ ನ್ಯಾಯಬೆಲೆ ಅಂಗಡಿ ಮಾಲೀಕರು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ, ಅಧಿಕಾರಿಗಳು ಈಗಾಗಲೇ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಹಣ ವಸೂಲಿ ಮಾಡದಂತೆ ಸೂಚನೆ ನೀಡಿದ್ದಾರೆ, ಅದನ್ನು ಮೀರಿ ಹಣ ವಸೂಲಿ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಿ,
ಶಕ್ತಿ ಯೋಜನೆಯಡಿ ಫೆಬ್ರವರಿ ಮಾಹೆಯಲ್ಲಿ ಪ್ರತಿದಿನದ ಸರಾಸರಿಯಂತೆ 29 ಸಾವಿರಕ್ಕೂ ಹೆಚ್ಚು ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರ ವಿತರಿಸಲಾಗಿದೆ, ಫೆಬ್ರವರಿ ಮಾಹೆಯಲ್ಲಿ 59.13 ಲಕ್ಷಕ್ಕೂ ಹೆಚ್ಚು ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯಡಿ ನೀಡಲಾಗಿದೆ ಎಂದು ತಿಳಿಸಿದರು.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 5 ಲಕ್ಷದ 49 ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳು ಇದ್ದು, ಈವರೆಗೂ ಜಿಲ್ಲೆಗೆ 314 ಕೋಟಿ ಅನುದಾನ ನೀಡಲಾಗಿದೆ, ಜಿಲ್ಲೆಯಲ್ಲಿ ಶೇ 97 ರಷ್ಟು ಪ್ರಮಾಣದಲ್ಲಿ ಗೃಹ ಜ್ಯೋತಿ ಅನ್ನು ಎಲ್ಲಾ ಮನೆಗಳಿಗೂ ತಲುಪಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ 7 ತಾಲ್ಲೂಕಿನ ಎಲ್ಲಾ ಪದವಿ ಹಾಗೂ ಡಿಪ್ಲೋಮೋ ಕಾಲೇಜುಗಳಲ್ಲಿ ಯುವ ನಿಧಿ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಗಿದೆ, 4702 ಅರ್ಹ ಫಲಾನುಭವಿಗಳು ಪ್ರಸ್ತುತ ಜಿಲ್ಲೆಯಲ್ಲಿದ್ದು ಎಲ್ಲರಿಗೂ ಡಿ.ಬಿ.ಟಿ ಯ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ, ಯುವನಿಧಿ ಯೋಜನೆಯಡಿ 7 ಕೋಟಿ 12 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಪ್ರಶಾಂತ್ ಬಾಬು ಕೆ.ಸಿ. ಗ್ಯಾರಂಟಿ ಯೋಜನೆಯ ಪ್ರಾಧಿಕಾರದ ಸದಸ್ಯರಾದ ವೀಣಾ ಶಂಕರ್, ರುದ್ರಪ್ಪ, ಮಹೇಶ್, ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಕೆ.ಎಸ್. ಆರ್. ಟಿ.ಸಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಕೆ.ಆರ್.ಪೇಟೆ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಜಾನಪದ ಜಾತ್ರೆ ಹಾಗೂ ಆಹಾರ ಮೇಳ

ಕೆ.ಆರ್.ಪೇಟೆ : ಇಲ್ಲಿನ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜಾನಪದ ಜಾತ್ರೆ ಹಾಗೂ ಗ್ರಾಮೀಣ ಸೊಗಡಿನ ಆಹಾರ ಮೇಳವು ಯಶಸ್ವಿಯಾಗಿ ನಡೆಯಿತು.
ಶಾಸಕ ಹೆಚ್.ಟಿ.ಮಂಜು ಎತ್ತಿನ ಗಾಡಿಯನ್ನು ಓಡಿಸುವ ಮೂಲಕ ಜಾನಪಸ ಜಾತ್ರೆಗೆ ಚಾಲನೆ ನೀಡಿ, ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಪೂರ್ವಜರು ಬೇಸಾಯ ಮಾಡುವಾಗ ಮಾಡುತ್ತಿದ್ದ ನೃತ್ಯಗಳು, ಜಾನಪದ ಹಾಡುಗಳು ಇಂದಿಗೂ ಜನಪದರ ಬಾಯಿಂದ ಬಾಯಿಗೆ ಹರಿದಾಡುತ್ತಿವೆ. ಸುಗ್ಗಿ ಯ ಸಂಭ್ರಮದಲ್ಲಿ ಹಾಡುವ ಹಾಡುಗಳು ಇಂದಿಗೂ ನಮ್ಮ ಬದುಕಿನ ಜೀವ ಸೆಲೆಯಾಗಿವೆ. ಮೌಡ್ಯವಿಲ್ಲದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು, ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿ ತವಾಗುತ್ತಿರುವ ಇಂದಿನ ದಿನಮಾನದಲ್ಲಿ ಮರಳಿ ಜಾನಪದ ಸಂಸ್ಕೃತಿಗೆ ಕರೆತರಲು ಇಂತಹ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ಸಹಾಯವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಮಾತನಾಡಿ, ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದಾರೆ. ಜಾನಪದದ ಮೂಲ ಬೇರೆ ಹೆಣ್ಣಾ ಗಿರುವುದರಿಂದ ಹೆಣ್ಣಿಗೂ ಜಾನಪದಕ್ಕೂ ಅವಿನಾಭಾವ ಸಂಬಂಧವಿದೆ. ಹೆಣ್ಣು ಮಕ್ಕಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ಹಾಡುವ ಹಾಡುಗಳು ಹಾಗೂ ನೃತ್ಯಗಳು ಜಾನಪದ ಕ್ಷೇತ್ರದ ಶಕ್ತಿಯನ್ನು ಇಮ್ಮಡಿಗೊಳಿಸಿವೆ ಎಂದು ಹೇಳಿದರು.
ಮಹಿಳಾ ಸರ್ಕಾರಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಬಿ. ಪ್ರತಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಇಂದು ವಿಶೇಷವಾಗಿ ಜಾನಪದ ಜಾತ್ರೆ ಹಾಗೂ ಗ್ರಾಮೀಣ ಸೊಗಡಿನ ಆಹಾರ ಮೇಳವನ್ನು ಆಯೋಜಿಸಲಾಗಿದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾದ ಜಾನಪದಕ್ಕೆ ಶಕ್ತಿ ತುಂಬುವ ರೀತಿಯಲ್ಲಿ ಇಂದು ವಿದ್ಯಾರ್ಥಿನಿಯರು ರೇಷ್ಮೆ ಸೀರೆಯನ್ನು ಉಟ್ಟು ಮದುಮಗಳ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಬಂದಿದ್ದಾರೆ. ದನಕರುಗಳು ಹಾಗೂ ಪ್ರಕೃತಿಯೇ ಜನಪದದ ಜೀವಾಳವಾಗಿದೆ. ಮೋಸ, ವಂಚನೆಯ ಬಗ್ಗೆ ತಿಳಿಯದ, ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಯುವ ಸಮುದಾಯವನ್ನು ಜಾಗೃತಿಗೊಳಿಸಿ ಮುನ್ನಡೆಸಲು ಇಂತಹ ಕಾರ್ಯಕ್ರಮಗಳು ವರದಾನವಾಗಿವೆ ಎಂದು ಹೇಳಿದರು.
ಪುರಸಭೆ ಸದಸ್ಯ ಗಿರೀಶ್, ಶಾಮಿಯಾನ ತಿಮ್ಮೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಚೇತನ್ ಕುಮಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
Mandya
ಹಾಸನ ಕೃಷಿ ವಿವಿಯನ್ನು ಬೆಂಗಳೂರಿನಲ್ಲೇ ಉಳಿಸಬೇಕೆಂಬುದು ಸರಿಯಲ್ಲ: ಪ್ರೊ. ಜಯಪ್ರಕಾಶ್ ಗೌಡ

ಮಂಡ್ಯ: ಮಂಡ್ಯದ ಕೃಷಿ ವಿಶ್ವವಿದ್ಯಾಲಯವು ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಜಿಲ್ಲೆಗಳನ್ನೊಳಗೊಂಡಂತಿದ್ದು, ಹಾಸನದ ರಾಜಕಾರಣಿಗಳು ಹಾಸನ ಕೃಷಿ ಕಾಲೇಜು ಮಾನ್ಯತೆಯನ್ನು ಬೆಂಗಳೂರಿನ ಕೃಷಿ ವಿವಿಯಲ್ಲೇ ಉಳಿಸಬೇಕೆಂದು ಪಟ್ಟು ಹಿಡಿದಿರುವುದು ಸರಿಯಲ್ಲ ಎಂದು ಕರ್ನಾಟಕ ಸಂಘದ ಅಧ್ಯಕ್ಷ, ಹಿರಿಯ ಸಾಹಿತ್ಯ ಚಿಂತಕ ಪ್ರೊ.ಜಯಪ್ರಕಾಶ್‌ಗೌಡ ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಮಂಡ್ಯ ವಿ.ಸಿ ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ ಮಾಡಿರುವುದು ಅಭಿನಂದನಾರ್ಹ, ಹಾಸನದ ರಾಜಕಾರಣಿಗಳು ಬೆಂಗಳೂರು ವಿವಿಯಲ್ಲೆ ಕೃಷಿ ಕಾಲೇಜು ಮಾನ್ಯತೆ ಮುಂದುವರೆಸಲು ಶಾಸನ ಸಭೆಯಲ್ಲಿ ಪ್ರತಿಪಾದಿಸಿ, ರಾಜ್ಯಪಾಲರಿಗೆ ಮನವಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕೃಷಿ ವಿವಿ ಸ್ಥಾಪನೆಗೂ ಮುನ್ನವೇ ಕೋಲ್ಮನ್ ಅವರು ವಿ.ಸಿ.ಫಾರಂ ಅನ್ನು ಸಂಶೋಧನಾ ಕೇಂದ್ರವನ್ನಾಗಿ ರೂಪಿಸಿ ಆಗಲೇ ೬೦೦ ಎಕರೆ ಭೂ ಪ್ರದೇಶ ನೀಡಿದ ಮೈಸೂರು ಅರಸರನ್ನು ಮರೆಯುವಂತಿಲ್ಲ. ಮಂಡ್ಯದ ವಿ.ಸಿ ಫಾರಂನಲ್ಲಿ ನಡೆದಿರವ ಸಂಶೋಧನೆಗೆ ವಿಶ್ವಮಾನ್ಯತೆ ದೊರೆತಿದ್ದು, ಜಾಗತಿಕ ಪೆಟೆಂಟ್ ಕೂಲ ಅಭಿಸಿದೆ ಎಂದು ಹೇಳಿದರು.
ಇಂತಾದರೂ ಹಾಸನ ಕೃಷಿ ಕಾಲೇಜನ್ನು ಮಂಡ್ಯ ಕೃಷಿ ವಿವಿ ವ್ಯಾಪ್ತಿಗೆ ತರದೇ ಹಾಸನ ಜಿಲ್ಲೆಯನ್ನು ಮಂಡ್ಯ ಕೃಷಿ ವಿವಿಯ ಹೊರಗುಳಿಯುವಂತೆ ಮಾಡಲು ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿಯೇ ಮನವಿ ಸಲ್ಲಿಸಲು ಮುಂದಾಗಿರುವುದು ಅಘಾತವನ್ನುಂಟು ಮಾಡಿದೆ ಎಂದರು.
ಹೆಚ್.ಡಿ.ದೇವೇಗೌಡರು, ಮಂಡ್ಯದಿಂದ ಗೆದ್ದು ಕೇಂದ್ರ ಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದ ಬಗ್ಗೆ ಅತ್ಯಂತ ಪ್ರಶಂಸನೀಯವಾಗಿ ಮಾತುಗಳನ್ನಾಡಿದ್ದಾರೆ. ಹಾಸನ ಮತ್ತು ಮಂಡ್ಯ ತಮ್ಮೆರಡು ಕಣ್ಣುಗಳೆಂದು, ರಾಜಕೀಯ ಪುನರ್‌ಜನ್ಮ ನೀಡಿದ್ದು ಮಂಡ್ಯ ಜಿಲ್ಲೆ ಅಂತಲೂ ಹಾಡಿ ಹೊಗಳಿದ್ದಾರೆ. ಹೀಗಿರುವಾಗಿ ಹಾಸನ ಕೃಷಿ ಕಾಲೇಜು ಮಂಡ್ಯ ಕ್ಕೆ ಬರವುದನ್ನು ತಡೆವುದು ಮಂಡ್ಯಕ್ಕೆ ಮಾಡುವ ಅಪಚಾರ ಎಂದರು.
ರಾಜಕೀಯವಾಗಿ ಮಂಡ್ಯ ಜಿಲ್ಲೆ ದೇವೇಗೌಡರ ಕುಟುಂಬ ಪೋಷಿಸುತ್ತಿದ್ದು, ಈ ಸಂಬಂಧ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರ ನಿಲುವನ್ನು ಪ್ರಶ್ನಿಸಬೇಕಿದೆ. ಶೀಘ್ರವಾಗಿ ಈ ಸಂಬಂಧ ಮಾತನಾಡಿ, ಹಾಸನದ ರಾಜಕಾರಣಿಗಳ ರಾಜಕಾರಣಿಗಳ ಬಾಯಿ ಮುಚ್ಚಿಸಿ, ನಿಲುವು ಘೋಷಿಸುವಂತೆ ಒತ್ತಾಯಿಸಿದರು.
ಮಂಡ್ಯ ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ಸರ್ಕಾರದ ಪ್ರಶ್ತಾವನೆಗೆ ವಿರುದ್ಧವಾಗಿ ಶಾಸಕ ರವಿಕುಮಾರ್‌ಗೌಡ ಬದ್ದತೆ ಹಾಗೂ ಒಲವು ಪ್ರಶಂಸನೀಯ, ಅದನ್ನು ಉಳಿಸಿ ಬೆಳೆಸುವ ಅಗತ್ಯ ಎಲ್ಲರ ಮೇಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎರಡೂ ವಿವಿಗಳನ್ನು ಉಳಿಸಿ ಬೆಳೆಸಲು ತೊಡಗಿಕೊಳ್ಳುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಕೆ.ಆರ್.ಪೇಟೆ ಕಸಾಪ ಮಾಜಿ ಅಧ್ಯಕ್ಷ ಸೋಮಶೇಖರ್ ಇದ್ದರು.
-
State23 hours ago
ಅಕ್ರಮ ಮರ ಕಡಿತಲೆಗೆ ಶಿಕ್ಷೆ ಪ್ರಮಾಣ ಹೆಚ್ಚಳ: ಈಶ್ವರ ಖಂಡ್ರೆ ಖಡಕ್ ಸೂಚನೆ
-
State24 hours ago
ಸತ್ಯವಂತರಿಗಿದು ಕಾಲವಲ್ಲ: ಉಚ್ಛಾಟನೆ ಬೆನ್ನಲ್ಲೇ ಟ್ವೀಟ್ ಮೂಲಕ ಯತ್ನಾಳ್ ಆಕ್ರೋಶ
-
Special10 hours ago
ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ
-
State24 hours ago
ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ ಮಾಡಿದ ಸಿಎಂ ಸಿದ್ದರಾಮಯ್ಯ
-
State6 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan7 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
State7 hours ago
ಪತ್ರಿಕೋದ್ಯಮ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಅವರಿಗೆ ಡಿ.ಲಿಟ್ ಪದವಿ
-
State5 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?