Mysore
ನಾನು ಚೀಫ್ ಮಿನಿಸ್ಟರ್ ಎರಡು ಬಾರಿ ಆಗ್ಬೇಕಾದರೆ ಶಿಕ್ಷಣ ಸಂವಿಧಾನ ಕಾರಣ — ಮುಖ್ಯಮಂತ್ರಿ ಸಿದ್ದರಾಮಯ್ಯ
ಜ್ಞಾನ ಒಬ್ಬರ ಸ್ವತ್ತಾಗಿದ್ದರೆ ಅಂಬೇಡ್ಕರ್ ಸಂವಿಧಾನ ರಚಿಸಲು ಸಾಧ್ಯ ಆಗುತ್ತಿರಲಿಲ್ಲ.
ಸುತ್ತೂರು ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ದೇಸಿಯ ಆಟಗಳನ್ನು ಆಡುವ ಮೂಲಕ ಗಮನ ಸೆಳೆದರು.
ನಂಜನಗೂಡು ಫೆ.07
ಸಂಪತ್ತು ಅಧಿಕಾರ ಒಬ್ಬರ ಕೈಲಿ ಕೇಂದ್ರೀಕೃತವಾಗಬಾರದು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಸಿಗುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುತ್ತೂರು ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಮಾತನಾಡಿದರು.
ಇಂದು ಇಡೀ ಸರ್ಕಾರ, ಎಲ್ಲಾ ಮಂತ್ರಿಗಳು, ಉಭಯ ಸದನಗಳ ಶಾಸಕರು, ಲೋಕಸಭೆ, ರಾಜ್ಯ ಸಭೆ ಸದಸ್ಯರು ಪ್ರತಿಭಟನೆ ಮಾಡಲು ದೆಹಲಿಗೆ ಹೋಗಿದ್ದೆವು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿಯಿಂದ ನೇರವಾಗಿ ಇಲ್ಲಿಗೆ ಬಂದಿದೆ.

ಜಾತ್ರೆಗೆ ಬರುವುದಾಗಿ ಶ್ರೀಗಳಿಗೆ ಮಾತು ಕೊಟ್ಟಿದ್ದೆ. ಬೆಳಿಗ್ಗೆ ಉದ್ಘಾಟನೆಗೆ ಬರಲಾಗಲಿಲ್ಲ. ಮೊದಲೇ ಹೇಳಿದಂತೆ ಸಂಜೆ ಆರು ಗಂಟೆಗೆ ಸರಿಯಾಗಿ ಬಂದೆ. ಸುತ್ತೂರು ಜಾತ್ರೆಯಲ್ಲಿ ಪ್ರತಿವರ್ಷ ತಪ್ಪದೇ ಭಾಗಿಯಾಗುತ್ತಾ ಬಂದಿದ್ದೇನೆ. ಇಂದು ಕೂಡ ಆಗಮಿಸಿ ಅತ್ಯಂತ ಸಂತೋಷದಿಂದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೇನೆ ಎಂದರು.
ಬೇರೆಡೆಯೂ ಜಾತ್ರೆಗಳು ನಡೆಯುತ್ತವೆ. ಆದರೆ, ಸುತ್ತೂರು ಜಾತ್ರಾ ಮಹೋತ್ಸವಕ್ಕೆ ವಿಶೇಷ ಮಹತ್ವವಿದೆ. ಬಸವಾದಿ ಶರಣರು 12ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣದ ಪ್ರತಿಪಾದನೆ ಮಾಡಿದರು. ನಾವು ಮನುಷ್ಯರು, ಮನುಷ್ಯ ಮನುಷ್ಯರ ನಡುವೆ ದ್ವೇಷ ಭಾವನೆ ಸರಿಯಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾತಿಯ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟದಂತೆ ಸಮಾಜ ಇರಬೇಕು ಎಂದು ಕುವೆಂಪು ಹೇಳಿದರು. ಕುವೆಂಪು ಅವರ ನುಡಿ ಸಾಕಾರ ಆಗಬೇಕಾದರೆ ಎಲ್ಲರೂ ಮನುಷ್ಯರಾಗಬೇಕು. ಎಲ್ಲರೂ ಹುಟ್ಟುವಾಗ ವಿಶ್ವಮಾನವರು, ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ. ಜ್ಞಾನ ವಿಕಾಸ ಆಗಬೇಕು, ಜ್ಞಾನ ಯಾರದೇ ಸ್ವತ್ತಲ್ಲ. ಜ್ಞಾನ ಒಬ್ಬರ ಸ್ವತ್ತಾಗಿದ್ದರೆ ಅಂಬೇಡ್ಕರ್ ಸಂವಿಧಾನ ರಚಿಸಲು ಸಾಧ್ಯ ಆಗುತ್ತಿರಲಿಲ್ಲ. ವಾಲ್ಮೀಕಿ ರಾಮಾಯಣ ಬರೆಯಲು, ವ್ಯಾಸರು ಮಹಾಭಾರತವನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದಲ್ಲಿ ಇನ್ನೂ ಸಮಾನತೆ ಬಂದಿಲ್ಲ. ಮೇಲು ಕೀಳು ಭಾವನೆ ಹೋಗಿಲ್ಲ. ಬರೀ ಓಟು ಹಾಕುವ ಸ್ವಾತಂತ್ರ್ಯ ಬಂದರೆ ಸಾಲದು. ಪ್ರತಿಯೊಬ್ಬರಿಗೂ ಆರ್ಥಿಕ ಸಾಮಾಜಿಕ ಶಕ್ತಿ ಬಂದಾಗ ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗಲಿದೆ ಎಂದರು.

ಸಮಾರಂಭದ ವೇದಿಕೆಯಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬನಾದ ನಾನು, ಹಿಂದುಳಿದ ವರ್ಗದವರು ಕುಳಿತಿದ್ದೇವೆ. ಇದಕ್ಕೆ ಸಂವಿಧಾನ ಕಾರಣವಾಗಿದೆ. ಸಂವಿಧಾನ ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ. ಕೆಲ ಪಟ್ಟಭದ್ರರು ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಬಸವಾದಿ ಶರಣರ ಆದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ವೇದಿಕೆ ಮೇಲೆ ಇವನಾರಾವ ಇವನಾರವ ಇವ ನಮ್ಮವ ಎಂದು ಹೇಳಿ ವೇದಿಕೆಯಿಂದ ಕೆಳಗಿಳಿದ ನಂತರ ನೀನು ಯಾವ ಜಾತಿ ಎಂದು ಕೇಳುವ ಪರಿಪಾಠ ಸರಿಯಲ್ಲ ಎಂದು ಹೇಳಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸುತ್ತೂರು ಮಠ ಧಾರ್ಮಿಕ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇಡೀ ದೇಶ ಗುರುತಿಸುವ ಕೆಲಸ ಮಾಡಿದೆ. ಸಮಾಜದಲ್ಲಿ ಬದಲಾವಣೆ ತರುವ ಕಾರ್ಯವನ್ನು ಶ್ರೀಮಠ ಮಾಡಿದೆ. ಸುತ್ತೂರು ಶ್ರೀಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಿದ್ದಾರೆ ಎಂದು ಹೇಳಿದರು.

ಜೆಎಸ್ಎಸ್ ತಾಂತ್ರಿಕ ಮಹಾ ವಿದ್ಯಾಲಯ ಲಕ್ಷಕ್ಕೂ ಹೆಚ್ಚು ಇಂಜಿನಿಯರ್ ಗಳನ್ನು ನೀಡಿದೆ. ವೈದ್ಯಕೀಯ ಕಾಲೇಜು ಸಾವಿರಾರು ಡಾಕ್ಟರ್ ಗಳನ್ನು ನೀಡಿದೆ. ಸುತ್ತೂರು ಸ್ವಾಮೀಜಿಯವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ದೇಸಿ ಆಟಗಳನ್ನು ಉದ್ಘಾಟಿಸುವ ವೇಳೆ ಸಚಿವ ಕೆ ಜೆ ಜಾರ್ಜ್ ಬಹಳ ಸೊಗಸಾಗಿ ರಂಗೋಲಿ ಬಿಡಿಸಿದರು. ದೇಸಿ ಆಟಗಳನ್ನು ಉಳಿಸುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ದೇಸಿ ಆಟಗಳನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕೆಂದರು.
ಕಾರ್ಯಕ್ರಮದಲ್ಲಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಭಾಷಣ ಮಾಡಿ, ಸ್ವಾತಂತ್ರ್ಯದ ಉದ್ದೇಶ ಕೋಮು ಸೌಹಾರ್ದ, ಸಾಮಾಜಿಕ ನ್ಯಾಯ, ಜಾತ್ಯಾತೀತ ಸಮಾಜದ ನಿರ್ಮಾಣ. ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇವೆ. ಇದಕ್ಕೆ ಸುತ್ತೂರು ಮಠ ಒತ್ತಾಸೆಯಾಗಿ ಕೆಲಸ ಮಾಡುತ್ತಾ ಬಂದಿದೆ.
ಸುತ್ತೂರು ಶ್ರೀಮಠ ಎಲ್ಲಾ ಕ್ಷೇತ್ರಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಾಗ ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡಿದೆ. ಸುತ್ತೂರು ಶ್ರೀಮಠ ಶಿಕ್ಷಣ ಕ್ಷೇತ್ರಕ್ಕೆ ಉದಾತ್ತವಾದ ಕೊಡುಗೆ ನೀಡಿದೆ ಎಂದು ಹೇಳಿದರು.

ಸುತ್ತೂರು ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ವೇದಿಕೆಯನ್ನೇರುತ್ತಿದ್ದಂತೆ ಜನರತ್ತ ಕೈ ಬೀಸಿದ ಸಿಎಂ ಸಿದ್ದರಾಮಯ್ಯ, ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯವಹಿಸಿದ್ದರು. ಸಚಿವ ಡಾ.ಜಿ. ಪರಮೇಶ್ವರ್, ಕೆ.ವೆಂಕಟೇಶ್, ಕೆ.ಜೆ.ಜಾರ್ಜ್, ಡಾ ಹೆಚ್.ಸಿ.ಮಹದೇವಪ್ಪ, ಡಾ.ಎಂ.ಸಿ.ಸುಧಾಕರ್, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.
Mysore
ಸೋಲು ಗೆಲುವು ಸಾಮಾನ್ಯ, ಸಮನಾಗಿ ಸ್ವೀಕರಿಸಿ : ಕ್ರೀಡಾಪಟುಗಳಿಗೆ ಸಂಸದ ಸುನಿಲ್ ಬೋಸ್ ಕರೆ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಕ್ರೀಡೆ ಮತ್ತು ಆಟ ಅಂದ ಮೇಲೆ ಸೋಲು ಗೆಲುವು ಸಾಮಾನ್ಯ. ಇವೆರಡನ್ನು ಸಮಾನಾಗಿ ಸ್ವೀಕರಿಸಬೇಕು. ಯಾವುದೇ ಅಹಿತಕರ ಘಟನೆ ಜರುಗದಂತೆ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಗೊಳಿಸಿದ್ದೀರ. ಗೆದ್ದ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಂಜನಗೂಡು ತಾಲೂಕು ಹೆಜ್ಜೆಗೆ ಜೋಡಿ ಮಾರಮ್ಮ ಹಬ್ಬದ ಪ್ರಯುಕ್ತ ಎಚ್.ಎಸ್. ಲಕ್ಷ್ಮೀನಾರಾಯಣ ಹಾಗೂ ಹೆಜ್ಜೆಗೆ ಆರ್ ಇಂಧನ ಬಾಬು ಅವರ ಸಾರಥ್ಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕ್ರೀಡಾಕೂಟದಲ್ಲಿ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಈ ಪೈಕಿ ಫೈನಲ್ ಪಂದ್ಯದಲ್ಲಿ ಗೆಲುವಿನಗೆ ಬೀರಿ ಮೊದಲನೇ ಸ್ಥಾನ ಪಡೆದ ಉಪ್ಪಿನಳ್ಳಿ ತಂಡ, ರನ್ನರ್ ಅಪ್ ಆದ ಹೆಜ್ಜಿಗೆ ಮತ್ತು ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆ ಮತ್ತು ಆಟದಲ್ಲಿ ಸೋಲು ಗೆಲುವು ಎರಡು ಇರುತ್ತದೆ. ಇವೆರಡನ್ನು ಸಮನಾಗಿ ಸ್ವೀಕರಿಸಬೇಕು. ಸೋಲು ಗೆಲುವಿಗಿಂತ ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವವನ್ನ ಬೆಳೆಸಿಕೊಳ್ಳಬೇಕು. ಕ್ರೀಡೆ ಕೇವಲ ಪ್ರಶಸ್ತಿಗಾಗಿ ಸೀಮಿತಗೊಳ್ಳಿಸಿಕೊಳ್ಳಬಾರದು. ನಮ್ಮ ದೇಹಕ್ಕೆ ಕ್ರೀಡೆ ಮತ್ತು ವ್ಯಾಯಾಮ ಅತ್ಯಗತ್ಯವಾಗಿದೆ. ದೇಹದಲ್ಲಿನ ಕಲ್ಮಶ ನೀರನ್ನು ಹೊರ ತೆಗೆಯುವಲ್ಲಿ ಕ್ರೀಡೆ ಮತ್ತು ವ್ಯಾಯಾಮ ಅನುಕೂಲವಾಗುತ್ತದೆ. ಆಯೋಜಿಸಿದ್ದ ಕ್ರೀಡಾಕೂಟದಲ್ಲಿ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ, ಯಾವುದೇ ಅಹಿತಕರ ಘಟನೆ ಜರುಗದಂತೆ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ್ದೀರ. ಮುಂದಿನ ದಿನಗಳಲ್ಲೂ ಇನ್ನು ಹೆಚ್ಚು ಹೆಚ್ಚು ಕ್ರೀಡೆಗಳು ಆಯೋಜನೆಗೊಳ್ಳಲಿ. ಇದನ್ನು ಆಯೋಜಿಸಿದ ಇಂಧನ ಬಾಬು ಸೇರಿದಂತೆ ಇನ್ನಿತರರಿಗೆ ಹೃತ್ಪೂರ್ವಕ ಅಭಿನಂದನೆಗಳು ಅಂತ ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮಾಜಿ ಧರ್ಮದರ್ಶಿ ಹೆಜ್ಜಿಗೆ ಇಂಧನ ಬಾಬು, ತಗಡೂರು ಬ್ಲಾಕ್ ಯೂಥ್ ಅಧ್ಯಕ್ಷ ಹಾಗೂ ಗುತ್ತಿಗೆದಾರರಾದ ಹೆಜ್ಜಿಗೆ ರವಿ, ಹಾಡ್ಯ ರಂಗಸ್ವಾಮಿ,
ಚೋಳ್ ರಾಜ್, ಕಾರವಾನ್ ಬಾರ್ ಗಿರಿ, ದಿನೇಶ್, ಆರ್ ಮಹದೇವು, ಸೇರಿದಂತೆ ಇನ್ನಿತರರು ಹಾಜರಿದ್ದರು.
Mysore
ಮಾ. 30ಕ್ಕೆ ಐತಿಹಾಸಿಕ ದೊಡ್ಡ ಜಾತ್ರೆ : ಶಾಸಕ ದರ್ಶನ್ ಧ್ರುವನಾರಾಯಣ್ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಮತ್ತು ಪ್ರಖ್ಯಾತಿಗಳಿಸಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಮಾ. 30 ರಂದು ನಡೆಯಲಿರುವ ದೊಡ್ಡ ಜಾತ್ರಾ ಮಹೋತ್ಸವವನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಶಾಸಕ ದರ್ಶನ್ ಧ್ರುವನಾರಾಯಣ್ ಸೂಚನೆ ನೀಡಿದರು.
ಇಂದು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ , ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸಮ್ಮುಖದಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯನ್ನುದ್ಧೇಶಿಸಿ ಮಾತನಾಡಿದರು.

ಒಂದೂವರೆ ತಿಂಗಳು ಮುಂಚಿತವಾಗಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು ಜಾತ್ರೆಯನ್ನು ವೈಭವಯುತವಾಗಿ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಜೊತೆಗೆ ಜಾತ್ರೆಯ ಕುರಿತು ರಾಜ್ಯವ್ಯಾಪಿ ಪ್ರಚಾರ ನೀಡಲು ಈಗಿನಿಂದಲೇ ಕ್ರಮ ವಹಿಸಬೇಕು. ಇನ್ನು ಕಪಿಲಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸದ್ಯ ತೀರಾ ಕಡಿಮೆಯಿರುವುದರಿಂದ ಯಂತ್ರಗಳನ್ನು ಬಳಸಿ ಜೊಂಡು ತೆರವುಗೊಳಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಜೊತೆಗೆ ಜಾತ್ರೆಯ ಸಮಯದಲ್ಲಿ ದೇಗುಲದ ಅಂಗಳ ಹಾಗೂ ರಥ ಬೀದಿಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವ ಸಲುವಾಗಿ ನಗರಸಭೆಯಿಂದ ಹೆಚ್ಚುವರಿಯಾಗಿ ಪೌರ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ ರಥೋತ್ಸವದ ಸಮಯದಲ್ಲಿ ರಥವನ್ನೆಳೆಯುವವರನ್ನು ಹೊರತುಪಡಿಸಿ ಸಾರ್ವಜನಿಕರು ರಥದ ಸಮೀಪಕ್ಕೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಜೊತೆಗೆ ಜಾತ್ರಾ ಮಹೋತ್ಸವದ ಸಮಯದಲ್ಲಿ ಸಿಕ್ಕಸಿಕ್ಕವರೆಲ್ಲರೂ ಡ್ರೋನ್ಗಳನ್ನು ಹಾರಿಸುತ್ತಾರೆ ಭದ್ರತೆಯ ಸಲುವಾಗಿ ಡ್ರೋನ್‌ಗಳನ್ನು ಹಾರಿಸುವುದನ್ನು ನಿಯಂತ್ರಿಸಲು ಸೂಚನೆ ನೀಡಿದರು. ಜಾತ್ರೆಯ ಸಮಯದಲ್ಲಿ ಐದು ದಿನಗಳ ಕಾಲ ಕಬಿನಿ ಅಣೆಕಟ್ಟೆಯಿಂದ ನದಿಗೆ ನೀರು ಹರಿಸಲು ಕ್ರಮ ವಹಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸುವ ಸಲುವಾಗಿ ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು ಇನ್ನು ಜಾತ್ರಾ ಮಹೋತ್ಸವದ ನೋಡೆಲ್ ಅಧಿಕಾರಿಯನ್ನಾಗಿ ಅಪರ ಜಿಲ್ಲಾಧಿಕಾರಿ ಶಿವರಾಜು ಅವರನ್ನು ನಿಯೋಜಿಸಲಾಗುತ್ತಿದ್ದು ಜಾತ್ರೆಯ ಒಂದು ವಾರ ಮೊದಲೇ ನಂಜನಗೂಡಿಗೆ ಆಗಮಿಸಿ ಅವರು ಪ್ರತಿದಿನ ಜಾತ್ರಾ ಮಹೋತ್ಸವ ಆಚರಣೆ ಸಂಬಂಧ ಅಧಿಕಾರಿಗಳೊಡನೆ ಸಭೆಗಳನ್ನು ನಡೆಸಲಿದ್ದಾರೆ ಹೀಗಾಗಿ ಸಂಘಸಂಸ್ಥೆಗಳವರು ಹಾಗೂ ಸ್ಥಳೀಯ ನಾಗರೀಕರು ಜಾತ್ರಾ ಮಹೋತ್ಸವದ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಎಡಿಸಿ ಶಿವರಾಜು, ಎಸಿ ಆಶಪ್ಪ ಪೂಜಾರಿ, ತಹಶೀಲ್ದಾರ್ ಸ್ಮಿತಾ ರಾಮು, ಡಿವೈಎಸ್‌ಪಿ ರಘು, ದೇವಸ್ಥಾನದ ಇಒ ಕೃಷ್ಣ, ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ವಿಚಾರವೇದಿಕೆ ಅಧ್ಯಕ್ಷ ಜಗದೀಶ್,ಪುರಸಭೆ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.
Mysore
ಅಶ್ವಿನ್ ಕುಮಾರ್‌ರನ್ನು ಸನ್ಮಾನಿಸಿದ ಜೆಡಿಎಸ್ ಮುಖಂಡರು
ತಿ.ನರಸೀಪುರ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಪಕ್ಷದ ನೂತನ ಜಿಲ್ಲಾಧ್ಯಕರಾಗಿ ಆಯ್ಕೆಗೊಂಡ ನಿಕಟಪೂರ್ವ ಶಾಸಕ ಎಂ.ಅಶ್ವಿನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷರಾದ ಬಳಿಕ ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿಮಿತ್ತ ಆಗಮಿಸಿದ್ದ ಎಂ.ಅಶ್ವಿನ್ ಕುಮಾರ್ ಅವರನ್ನು ಪಕ್ಷದ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸರಳವಾಗಿ ಸನ್ಮಾನಿಸಿ, ಗೌರವಿಸಿದರು.

ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ ಚಿನ್ನಸ್ವಾಮಿ ಮಾತನಾಡಿ, ಸರಳ, ಸಜ್ಜನಿಕೆ ವ್ಯಕ್ತಿತ್ವದಿಂದ ಸಾಮಾನ್ಯ ಜನರ ಕೈಗೆ ಸಿಗುವ ಶಾಸಕರಾಗಿದ್ದ ಎಂ.ಅಶ್ವಿನ್ ಕುಮಾರ್ ಅವರು ಪಕ್ಷದ ಜಿಲ್ಲಾಧ್ಯಕ್ಷ ಆಗಿರುವುದು ಹೆಮ್ಮೆಯ ವಿಷಯವಾಗಿದೆ. ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಹುಮ್ಮಸ್ಸು ಮೂಡಿದೆ.
ಮುಂದಿನ ದಿನ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿ, ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಕಟ್ಟೆಪುರ ಸಿದ್ದಪ್ಪ, ತಿರುಮಕೂಡಲು ಜಯರಾಮ್, ರಾಜೇಶ್, ದ್ವಾರಕೀಶ್, ಮಹದೇವಸ್ವಾಮಿ, ಬೆನಕನಹಳ್ಳಿ ನಾಗೇಶ್ ಹಾಗೂ ಇತರರು ಇದ್ದರು.
-
Mandya13 hours agoಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಡಿಸಿ ಡಾ.ಕುಮಾರ
-
Mandya14 hours agoಬೂದನೂರು ಗ್ರಾಮ ಪಂಚಾಯತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ
-
Hassan14 hours agoಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಎಚ್ಡಿಕೆ ಅಭಿಮಾನಿಗಳಿರುವ ಕ್ಷೇತ್ರ: ನಿಖಿಲ್ ಕುಮಾರಸ್ವಾಮಿ
-
Chamarajanagar21 hours agoಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ
-
Mysore19 hours agoಹಣ್ಣುಗಳ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಿದ ರವಿ ಮಹದೇವ್
-
Mandya12 hours agoಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ : ಮನೋಜ್ ಕುಮಾರ್ ಮೀನಾ
-
Special8 hours agoಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
-
Mandya11 hours agoಫೆ.13 ರಿಂದ 19 ರವರೆಗೆ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ 90ನೇ ಮಹಾಶಿವರಾತ್ರಿ ಮಹೋತ್ಸವ
