Connect with us

State

ನಮ್ಮ ಶಾಸಕರಿಗೆ ಕುಮಾರಸ್ವಾಮಿ ಆಫರ್, ಧಮಕಿ ಬಗ್ಗೆ ಮಾಹಿತಿ ಬಂದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Published

on

ಬೆಂಗಳೂರು, ಫೆ.19: “ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಸೋಮವಾರ ಹೇಳಿದ್ದಿಷ್ಟು:

“ಕುಮಾರಸ್ವಾಮಿ ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮಕಿ ಹಾಕುತ್ತಿದ್ದಾರೆ, ಎಲ್ಲವೂ ನಮಗೆ ತಿಳಿಯುತ್ತಿದೆ. ಕುಮಾರಸ್ವಾಮಿ ಯಾರಿಗೆ, ಯಾವೆಲ್ಲಾ ಆಫರ್ ಕೊಟ್ಟಿದ್ದಾರೆ ಎಂದು ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಈಗ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.”

ವಿರೋಧ ಪಕ್ಷಗಳು ಅಡ್ಡಮತದಾನದ ಪ್ರಯತ್ನ ಮಾಡುತ್ತಿದ್ದಾರಾ ಎಂದು ಕೇಳಿದಾಗ, “ಸುಮ್ಮನೇ ಐದನೇ ಅಭ್ಯರ್ಥಿ ಕಣಕ್ಕಿಳಿಸುತ್ತಾರಾ? ಒಂದು ಪ್ರಯತ್ನ ಮಾಡೋಣ ಎಂದು ಹಾಕಿದ್ದಾರೆ. ಮತದಾನದ ದಿನ ಎಲ್ಲವೂ ಗೊತ್ತಾಗಲಿದೆ” ಎಂದರು.

ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತೀರಾ ಎಂದು ಕೇಳಿದಾಗ, “ನಮಗೆ ಅದರ ಅಗತ್ಯವಿಲ್ಲ. ಜನ ನಮಗೆ 136 ಸೀಟುಗಳನ್ನು ನೀಡಿದ್ದಾರೆ. 2 ಕ್ಷೇತ್ರದ ಪಕ್ಷೇತರರು ನಮ್ಮ ಜತೆಗಿದ್ದಾರೆ. ನಮ್ಮ ಜತೆ ಇರುವ ಬೇರೆಯವರ ಬಗ್ಗೆ ಈಗ ಮಾತನಾಡುವುದಿಲ್ಲ. ಮತದಾನದ ನಂತರ ಮಾತನಾಡುತ್ತೇವೆ” ಎಂದು ತಿಳಿಸಿದರು.

ಶಾಸಕರಾದ ಸೋಮಶೇಖರ್, ಗೋಪಾಲಯ್ಯ ಜತೆ ವೈಯಕ್ತಿಕ ಬಾಂಧವ್ಯವಿದೆ:

ಸೋಮಶೇಖರ್ ಅವರ ಜತೆ ವಿಮಾನ ಪ್ರಯಾಣ ಹಾಗೂ ಗೋಪಾಲಯ್ಯ ಅವರ ಭೇಟಿ ವಿಚಾರವಾಗಿ ಕೇಳಿದಾಗ, “ಸೋಮಶೇಖರ್ ಹಾಗೂ ಗೋಪಾಲಯ್ಯ ಅವರ ಜತೆ ವೈಯಕ್ತಿಕ ಸ್ನೇಹ, ಸಂಬಂಧಗಳಿವೆ” ಎಂದು ತಿಳಿಸಿದರು.

ಸೋಮಶೇಖರ್ ಅವರು ಪದೇ ಪದೆ ನಿಮ್ಮ ಜತೆ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಕೇಳಿದಾಗ, “ಗುರುತಿಸಿಕೊಳ್ಳುವುದಲ್ಲ. ಅವರು ಕೇವಲ ಮೂರು ವರ್ಷ ಮಾತ್ರ ಬೇರೆ ಕಡೆ ಹೋಗಿದ್ದಾರೆ. ಆದರೆ 35 ವರ್ಷಗಳಿಂದ ನಾವು ರಾಜಕೀಯವಾಗಿ ಸಂಸಾರ ಮಾಡಿದ್ದೇವೆ” ಎಂದು ತಿಳಿಸಿದರು.

ಕಮಲನಾಥ್ ಸೇರಿದಂತೆ ಯಾರೂ ಬಿಜೆಪಿ ಸೇರಲ್ಲ:

ಬಿಜೆಪಿ ಬರೀ ಸುಳ್ಳನ್ನು ಪ್ರಚಾರ ಮಾಡಿಕೊಂಡೆ ಇರುತ್ತದೆ. ಕಮಲನಾಥ್ ಅವರು ಬಹಳ ಹಿರಿಯ ನಾಯಕರು. ಅವರು ಈಗಷ್ಟೇ ಚುನಾವಣೆ ಮುಗಿಸಿದ್ದಾರೆ. ಅವರು ಎಲ್ಲೂ ಬಿಜೆಪಿ ಸೇರುವುದಾಗಿ ಹೇಳಿಲ್ಲ. ಆದರೂ ಅವರು ಬಿಜೆಪಿ ಸೇರುತ್ತಾರೆ ಎಂದು ಸುಳ್ಳು ಹರಡುತ್ತಾರೆ. ಬೇರೆಯವರ ಹೆಸರು ಸೇರಿಸುತ್ತಾರೆ. ಕಮಲನಾಥ್ ಅವರು 50 ವರ್ಷಗಳ ರಾಜಕಾರಣದಲ್ಲಿ ಗಾಂಧಿ ಕುಟುಂಬದ ಜತೆ ಒಡನಾಟ ಇಟ್ಟುಕೊಂಡು ಪಕ್ಷ ಕಟ್ಟಿದ್ದಾರೆ. ಇಂತಹವರು ಬಿಜೆಪಿ ಸೇರುತ್ತಾರೆ ಎಂದು ಸುಳ್ಳು ಹೇಳಿ ಅವರ ಜಾತಿ ಕೆಡಿಸಿ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಕಳೆದ 35 ವರ್ಷಗಳಿಂದ ನನಗೆ ಕಮಲನಾಥ್ ಅವರು ಪರಿಚಯವಿದ್ದಾರೆ. ಅವರು ಸಿದ್ಧಾಂತ, ಮೌಲ್ಯಗಳ ವ್ಯಕ್ತಿ. ಅವರು ಸಿದ್ಧಾಂತ ಬಿಟ್ಟು ಈ ವಯಸ್ಸಿನಲ್ಲಿ ಕಾಂಗ್ರೆಸ್ ಯಾಕೆ ತೊರೆಯುತ್ತಾರೆ? ಇನ್ನು ಮನೀಶ್ ತಿವಾರಿ ಅವರೂ ಕೂಡ ಕಾಂಗ್ರೆಸ್ ಪಕ್ಷದ ಪ್ರಮುಖ ಸಂಘಟಕರು. ಇವರೆಲ್ಲರೂ ಕಾಂಗ್ರೆಸ್ ಪಕ್ಷದ ನಾಯಕರು. ಕಮಲನಾಥ್ ಅವರೂ ಸೇರಿದಂತೆ ಯಾರೊಬ್ಬರು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷ ಯಾವುದೇ ಒಬ್ಬ ನಾಯಕ ಮೇಲೆ ಅವಲಂಬಿತವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಕಾರ್ಯಕರ್ತರ ಬುನಾದಿ ಇದೆ. ಗಾಂಧಿ ಕುಟುಂಬ ಇರುವವರೆಗೂ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲಿದೆ. ಕಾಂಗ್ರೆಸ್ ಪಕ್ಷ ಇರುವವರೆಗೂ ದೇಶ ಒಗ್ಗಟ್ಟಾಗಿರಲಿದೆ.

ಬಿಜೆಪಿ ಬಲಿಷ್ಠವಾಗಿದ್ದರೆ ಕಾಂಗ್ರೆಸ್ ನಾಯಕರನ್ನು ಯಾಕೆ ಸೆಳೆಯುತ್ತಿದ್ದಾರೆ?

“ಬಿಜೆಪಿ ಬಲಿಷ್ಠವಾಗಿದ್ದರೆ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿರುವುದೇಕೆ? ಬಿಜೆಪಿ ದುರ್ಬಲವಾಗಿರುವುದಕ್ಕೆ ಕಾಂಗ್ರೆಸ್ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಮಂತ್ರಿಗಳು ಈ ಚುನಾವಣೆಯಲ್ಲಿ 370 ಕ್ಷೇತ್ರ ಗೆಲ್ಲುವುದಾಗಿ ಹೇಳಿದ್ದಾರೆ. ಬಿಜೆಪಿ ಅಷ್ಟು ಕ್ಷೇತ್ರ ಗೆಲ್ಲುವುದು ನಿಜವೇ ಆದರೆ ಕಾಂಗ್ರೆಸ್ ನಾಯಕರನ್ನು ಯಾಕೆ ಸೆಳೆಯುತ್ತಿದ್ದಾರೆ? ಯಾರು ಗೆಲ್ಲಬೇಕು ಎಂದು ಜನ ತೀರ್ಮಾನಿಸಲಿದ್ದಾರೆ” ಎಂದರು.

ಹೈಕಮಾಂಡ್ ತೀರ್ಮಾನ ಎಲ್ಲರೂ ಪಾಲಿಸಬೇಕು:

ಸಚಿವರು ಲೋಕಸಭೆ ಚುನಾವಣೆಲ್ಲಿ ಸ್ಪರ್ಧಿಸಲು ಮನಸ್ಸಿಲ್ಲ ಎಂದು ಕೇಳಿದಾಗ, “ಲೋಕಸಭೆ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷದ ತೀರ್ಮಾನವನ್ನು ನಾನು ಸೇರಿದಂತೆ ಎಲ್ಲರೂ ಪಾಲಿಸಬೇಕು. ನಾವೆಲ್ಲ ಒಟ್ಟಾಗಿ ಕೆಲಸ ಮಾಡಿ ಹೆಚ್ಚಿನ ಕ್ಷೇತ್ರದಲ್ಲಿ ಪಕ್ಷ ಗೆಲ್ಲುವಂತೆ ಮಾಡಬೇಕು” ಎಂದು ತಿಳಿಸಿದರು.

ಕುವೆಂಪು ಅವರ ತತ್ವ ಸಿದ್ಧಾಂತ ಪಾಲನೆ, ಪ್ರಚಾರ ಮಾಡುತ್ತಿರುವವರು ನಾವು:

ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾವು ಕುವೆಂಪು ಅವರ ಆಚಾರ, ವಿಚಾರ ಪ್ರಚಾರ ಮಾಡುತ್ತಿದ್ದೇವೆ. ಕುವೆಂಪು ಅವರ “ಭಾರತ ಜನನಿಯ ತನುಜಾತೆ…”, “ಸರ್ವಜನಾಂಗದ ಶಾಂತಿಯ ತೋಟ…” ಸಂದೇಶವನ್ನು ಪ್ರತಿನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯದ ಜನರಿಗೆ ಹೇಳುತ್ತಾ ಬಂದಿದ್ದೇವೆ. ಕುವೆಂಪು ಅವರ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸಿ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದರಲ್ಲೂ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಜನರ ಬದುಕಿನ ಬಗ್ಗೆ ಯೋಚಿಸುವುದಿಲ್ಲ, ಭಾವನೆ ಬಗ್ಗೆ ಮಾತ್ರ ಆಲೋಚಿಸಿ ಸಮಾಜ ಕೆಡಿಸುವ ಕೆಲಸ ಮಾಡುತ್ತಾರೆ” ಎಂದರು.

ಈ ಘೋಷವಾಕ್ಯ ಬದಲಾವಣೆ ಅಗತ್ಯವೇನಿದೆ ಎಂದು ಕೇಳಿದಾಗ, “ಶಾಲೆಗಳಿಗೆ ಕೈಮುಗಿದು ಹೋಗುವುದರಲ್ಲಿ ತಪ್ಪೇನಿಲ್ಲ. ಹನುಮಂತಯ್ಯನವರು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಿದ್ದಾರೆ. ಬಿಜೆಪಿಯವರು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ” ಎಂದರು.

ಬರ ನಿರ್ವಹಣೆಗೆ ಅಗತ್ಯ ಕ್ರಮ:

ಬರದಿಂದಾಗಿ ನೀರಿನ ಕೊರತೆ ವಿಚಾರವಾಗಿ ಕೇಳಿದಾಗ, “ಬರ ಪರಿಸ್ಥಿತಿಯಿಂದಾಗ ನೀರಿನ ಅಭಾವ ಹೆಚ್ಚಿದೆ. 200 ತಾಲೂಕುಗಳಲ್ಲಿ ಅಂತರ್ಜಲ ನೀರಿನ ಮಟ್ಟ ಕುಸಿದಿದೆ. ಬೆಂಗಳೂರಿನ 110 ಹಳ್ಳಿಗಳಿಗೆ ಸೇರಿದಂತೆ ಕುಡಿಯುವ ನೀರು ಪೂರೈಸಲು ನಮ್ಮ ಸರ್ಕಾರ ಬಜೆಟ್ ನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಇನ್ನು ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ಬಳಸಲು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ರಾಜ್ಯದ ಇತರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಧಿಕಾರಿಗಳಿಗೆ ಹಣ ನೀಡಲಾಗಿದೆ. ಕೆಲವು ಶಾಸಕರು ಈಗಾಗಲೇ ಇರುವ ಕೊಳವೆ ಬಾವಿಗಳನ್ನು ಇನ್ನು 500 ಅಡಿಗಳಷ್ಟು ಆಳಕ್ಕೆ ಕೊರೆಸಿದರೆ ಹೊಸ ಕೊಳವೆಬಾವಿ ಕೊರೆಯುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ. ಈ ಅವಕಾಶದ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಕಮಲ್ ಹಸನ್ ಅವರು ಇಂಡಿಯಾ ಮೈತ್ರಿಕೂಟಕ್ಕೆ ಸೇರಲು ಮುಂದಾಗಿದ್ದು ಇದರಿಂದ ಮೈತ್ರಿಗೆ ಅನುಕೂಲವಾಗುತ್ತದೆಯೇ ಎಂದು ಕೇಳಿದಾಗ, “ಖಂಡಿತವಾಗಿಯೂ ಅನುಕೂಲವಾಗುತ್ತದೆ. ನಮ್ಮ ಜತೆ ಕೈಜೋಡಿಸುವವರಿಗೆ ನಾವು ಸ್ವಾಗತಿಸುತ್ತೇವೆ” ಎಂದು ತಿಳಿಸಿದರು.

ಶಾಸಕರ ವಿರುದ್ಧದ ಎಫ್ಐಆರ್ ಖಂಡಿಸಿ ಬಿಜೆಪಿ, ವಿಹೆಚ್ ಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಜೆಪಿ ಸ್ನೇಹಿತರು ನಮಗೆ ಕೆಲವು ಪಾಠ ಕಲಿಸಿದ್ದು, ನಾವು ಆ ಪಾಠ ಕಲಿತಿದ್ದೇವೆ” ಎಂದರು.

Continue Reading
Click to comment

Leave a Reply

Your email address will not be published. Required fields are marked *

State

ಇನ್ಮುಂದೆ ವಾಟ್ಸಪ್ ನಲ್ಲೇ ಸಿಗಲಿವೆ `ಗ್ರಾಮ ಪಂಚಾಯಿತಿ’ಯ ಈ ಎಲ್ಲಾ ಸೇವೆಗಳು!

Published

on

ಮೊದಲೆಲ್ಲಾ ಗ್ರಾಮ ಪಂಚಾಯ್ತಿ ಸೇವೆಗಳಿಗೆ ( Gramapanchayat Service ) ಸಂಬಂಧಿಸಿದಂತೆ ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಇನ್ಮುಂದೆ ಯಾವುದೇ ಸೌಲಭ್ಯ ಸೇವೆ ಪಡೆಯಲು ಅರ್ಜಿ ಸಲ್ಲಿಕೆ ಮತ್ತಷ್ಟು ಸರಳಗೊಳಿಸಲಾಗಿದೆ. ಅದೇನು ಅಂದ್ರೇ ಜಸ್ಟ್ ಈ ನಂಬರ್ ಗೆ ವಾಟ್ಸಾಪ್ ( WhatsApp ) ಮಾಡಿ ಸಾಕು.
ವಾಟ್ಸ್ ಆಪ್ ಮೂಲಕವೇ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ.

ನೀವು 8277506000 ಸಂಖ್ಯೆಗೆ ವಾಟ್ಸಾಪ್‌ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್‌ ಚಾಟ್‌ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಅಗತ್ಯವಿರುವ ಮಾಹಿತಿ ತಿಳಿಯಬಹುದು.

“ಪಂಚಮಿತ್ರ” ಪೋರ್ಟಲ್ ಮೂಲಕ ಈ ಕೆಳಗಿನ ಗ್ರಾಮ ಪಂಚಾಯತಿಗಳ ಮಾಹಿತಿ ಮತ್ತು ವಿವರಗಳನ್ನು ಪಡೆಯಬಹುದಾಗಿದೆ.

1. ಚುನಾಯಿತ ಪ್ರತಿನಿಧಿಗಳ ವಿವರಗಳು
2. ಸಿಬ್ಬಂದಿಗಳ ವಿವರಗಳು
3. ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡಾವಳಿಗಳು
4. ಗ್ರಾಮ ಪಂಚಾಯತ್ಗಳ ಮುಂಬರುವ ಸಭೆಗಳ ಮಾಹಿತಿ
5. ಆದಾಯ ಸಂಗ್ರಹ ವಿವರಗಳು
6. ಸೇವೆಗಳ ವಿವರಗಳು
7. ಸ್ವ ಸಹಾಯ ಗುಂಪಿನ ವಿವರಗಳು
8. ಗ್ರಾಮ ಪಂಚಾಯತ್ಗಳ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು
9. 4 (1) (a) & 4 (1) (b) RTI ದಾಖಲೆಗಳು

ಈ ಕೆಳಗಿನ ಸೇವೆಗಳಿಗೆ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಸೇವೆಗಳನ್ನು ಪಡೆಯಬಹುದಾಗಿದೆ. ಅರ್ಜಿಗಳ ಸ್ಥಿತಿಗತಿಯನ್ನು ಸಹ ಪರಿಶೀಲಿಸಬಹುದಾಗಿದೆ.

1. ವ್ಯಾಪಾರ ಪರವಾನಗಿ
2. ಹೊಸ ನೀರು ಸರಬರಾಜು ಸಂಪರ್ಕ
3. ನೀರು ಸರಬರಾಜಿನ ಸಂಪರ್ಕ ಕಡಿತ
4. ಕುಡಿಯುವ ನೀರಿನ ನಿರ್ವಹಣೆ
5. ಬೀದಿ ದೀಪದ ನಿರ್ವಹಣೆ
6. ಗ್ರಾಮ ನೈರ್ಮಲ್ಯದ ನಿರ್ವಹಣೆ
7. ಕಟ್ಟಡ ನಿರ್ಮಾಣ ಲೈಸೆನ್ಸ್
8. ಸ್ವಾಧೀನ ಪ್ರಮಾಣಪತ್ರ
9. ರಸ್ತೆ ಅಗೆವುದಾಕ್ಕಾಗಿ ಅನುಮತಿ
10. ಕೈಗಾರಿಕಾ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
11. ನಮೂನೆ 11ಬಿ
12. MGNREGA ಅಡಿಯಲ್ಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ
13. ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು
14. ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ/ನಿಯಮಿತಗೊಳಿಸುವಿಕೆ
15. ಹೊಸ/ಅಸ್ತಿತ್ವದಲ್ಲಿರುವ ಓವರ್ಗ್ರೌಂಡ್ ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ/ನಿಯಮಿತಗೊಳಿಸುವಿಕೆ
16. ನಮೂನೆ 9/11ಎ
17. ನಿರಾಕ್ಷೇಪಣಾ ಪತ್ರ NOC
ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ ಈ ಕೆಳಗಿನ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದಾಗಿದೆ ಹಾಗೂ ಕುಂದುಕೊರತೆಯ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬಹುದಾಗಿದೆ.

Continue Reading

State

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ನಿರ್ಣಯವನ್ನು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ದೇವೆ – ಸಿದ್ದರಾಮಯ್ಯ

Published

on

ಮೀಸಲಾತಿಯ ಹಂಚಿಕೆ, ಸುಪ್ರೀಂ ಕೋರ್ಟ್‌ನ ಆದೇಶ ಪಾಲನೆ ಹಾಗೂ ಇನ್ನಿತರೆ ವಿಷಯಗಳಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಏಕಸದಸ್ಯ ಆಯೋಗ ರಚನೆಗೆ ತೀರ್ಮಾನಿಸಲಾಗಿದೆ.

ಈ ಆಯೋಗಕ್ಕೆ ವರದಿ ಸಲ್ಲಿಸಲು ಮೂರು ತಿಂಗಳ ಸಮಯ ನಿಗದಿ ಪಡಿಸಲಾಗಿದ್ದು, ವರದಿ ಸಲ್ಲಿಕೆಯಾಗುವವರೆಗೆ ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸಬಾರದು ಎಂಬ ನಿರ್ಧಾರಕ್ಕೆ ಬರಲಾಗಿದೆ.

ಈ ವಿಚಾರವನ್ನು ನಿನ್ನೆಯ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಆದಾಗ್ಯೂ, ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಸುದ್ದಿ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಈಗಾಗಲೇ ಪ್ರಕಟಗೊಂಡಿರುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಚಾಲ್ತಿಯಲ್ಲಿರುವ ನೇಮಕ ಪ್ರಕ್ರಿಯೆಗಳು ಮುಂದುವರಿಯಲಿದೆ. ಹೊಸ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸೀಮಿತವಾಗಿ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದು, ಸರ್ಕಾರವು ಎಲ್ಲಾ ನೇಮಕಾತಿಗಳನ್ನು ಸ್ಥಗಿತಗೊಳಿಸಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.

Continue Reading

State

ಪಟಾಕಿ ಸಂಗ್ರಹ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಟ್ಟು 154 ಜನರಿಗೆ ಗಾಯ

Published

on

ಕಾಸರಗೋಡು: ನೀಲೇಶ್ವರ ಸಮೀಪದ ಅಂಜುತಂಬಲಂ ವೀರರ್ಕಾವ್ ದೈವ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಟ್ಟು 154 ಜನರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ 97 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಇಂಬಶೇಖರ್ ಹೇಳಿದರು. ಸೋಮವಾರ ತಡ ರಾತ್ರಿ 12 ಗಂಟೆಯ ವೇಳೆಗೆ ನಾಡನ್ನೆ ನಡುಗಿಸಿದ ಈ ದುರ್ಘಟನೆ ಸಂಭವಿಸಿದೆ.

ಜನ ಸಮೂಹ ಗುಂಪಾಗಿ ಸೇರಿದ್ದ ವೇಳೆ ಪಟಾಕಿ ಸಿಡಿಸಲಾಗಿದ್ದು ಈ ವೇಳೆ ಅಸುರಕ್ಷಿತವಾಗಿ ದಾಸ್ತಾನಿಸಿರಿದ್ದ ಪಟಾಕಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿದ್ದು ಮಕ್ಕಳು ಮಹಿಳೆಯ ಸಹಿತ ಜನ‌ಗುಂಪಾಗಿ ಓಡತೊಡಗಿದ್ದರು‌.

ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಂಚುತಂಬಲಂ ವೀರರ್ಕವ್ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ನೂರಾರು ಜನರು ಸೇರಿದ್ದರು.

ಸುಟ್ಟಗಾಯಗಳಲ್ಲದೆ, ಕಾಲ್ತುಳಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಅನುಮತಿ ಇಲ್ಲದೆ ಪಟಾಕಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಇಂಬಶೇಖರ್ ತಿಳಿಸಿದ್ದಾರೆ.

ಕನಿಷ್ಠ ಜನ ಅಂತರ ಕಾಯ್ದುಕೊಳ್ಳದೆ ಪಟಾಕಿ ಸಿಡಿಸಲಾಯಿತು. ಕಾನೂನಿನ ಪ್ರಕಾರ 100 ಮೀಟರ್ ಅಗತ್ಯವಿದೆ. ಎರಡ್ಮೂರು ಅಡಿ ಅಂತರದಲ್ಲಿ ಪಟಾಕಿ ಸಿಡಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಟಾಕಿಗಳನ್ನು ಸಿಡಿಸುವ ಸಮೀಪದಲ್ಲಿಯೇ ಪಟಾಕಿ ಇಡುತ್ತಿರುವುದು ಅಪಾಯಕ್ಕೆ ಕಾರಣವಾಗಿತ್ತು .ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಸಂದೀಪ್ ಸ್ಥಿತಿ ಚಿಂತಾಜನಕವಾಗಿದೆ.80ರಷ್ಟು ಸುಟ್ಟ ಗಾಯಗಳೊಂದಿಗೆ ಸಂದೀಪ್ ಅವರನ್ನು ಬೆಳಗ್ಗೆ ಪರಿಯಾರಂ ವೈದ್ಯಕೀಯ ಕಾಲೇಜಿನಿಂದ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಸದ್ಯ ಐವರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಞಂಗಾಡ್ ಆಸ್ಪತ್ರೆಯಲ್ಲಿ 16, ಸಂಜೀವನಿ ಆಸ್ಪತ್ರೆಯಲ್ಲಿ 10, ಐಶಾಲ್ ಆಸ್ಪತ್ರೆಯಲ್ಲಿ 17, ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ 5, ಕಣ್ಣೂರು ಮಿಮ್ಸ್‌ನಲ್ಲಿ 18, ಕೋಝಿಕ್ಕೋಡ್ ಮಿಮ್ಸ್‌ನಲ್ಲಿ 2 ಮತ್ತು ಅರಿಮಲ ಆಸ್ಪತ್ರೆಯಲ್ಲಿ 3.ಕೆಎಎಚ್ ಚೆರುವತ್ತೂರಿನಲ್ಲಿ 2, ಮನ್ಸೂರ್ ಆಸ್ಪತ್ರೆಯಲ್ಲಿ 5 ಮತ್ತು ದೀಪಾ ಆಸ್ಪತ್ರೆಯಲ್ಲಿ ಒಬ್ಬರು,18 ಮಂದಿ ಮಂಗಳೂರು ಎಂಜೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

Trending

error: Content is protected !!