Hassan
ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಲಿ, ಕ್ಷಮೆ ಕೇಳಲಿ ಜಿ.ಎಸ್. ಕುಮಾರಸ್ವಾಮಿ ಆಗ್ರಹ
ಹಾಸನ : ಮಾಜಿ ಸಚಿವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವರು ಬಿ. ಶಿವರಾಮ್ ಅವರನ್ನು ಕ್ಷಮೆ ಕೇಳಬೇಕು ಹಾಗೂ ಈ ವಿಚಾರವನ್ನು ಹೈಕಮಾಂಡ್ ಗೆ ದೂರು ನೀಡಲಾಗುವುದು, ಕೂಡಲೇ ಸಚಿವರ ಬದಲಾವಣೆ ಮಾಡಬೇಕೆಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಕುಮಾರಸ್ವಾಮಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ೨೦೨೪ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಬೆರಳೆಣಿಕೆಯ ದಿನಗಳಷ್ಟಿದ್ದು, ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣರವರು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ಕೊಡದೆ ಯಾವ ಕ್ಷೇತ್ರದಲ್ಲೂ ಪಕ್ಷದ ಸಂಘಟನೆ ವಿಚಾರವಾಗಿ ಸಭೆ, ಸಮಾರಂಭಗಳನ್ನು ಮಾಡದೆ ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆಯದೆ ಉಡಾಫೆ ತೋರಿಸುತ್ತಿರುವುದನ್ನು ನೋಡಿದರೆ ಇವರಿಗೆ ಅಧಿಕಾರ ದಾಹ ಒಂದೇ ಬೇಕಾಗಿರುವುದು ಬಿಟ್ಟರೆ ಪಕ್ಷದ ಏಳಿಗೆ ಇವರಿಗೆ ಬೇಕಾಗಿಲ್ಲ. ಹಾಗೂ ಸಂಘಟನೆ ಮಾಡುವುದಿಲ್ಲ. ನನಗೆ ಯಾವ ಹೈಕಮಂಡ್ ಲೆಕ್ಕಕ್ಕಿಲ್ಲ ಎಂಬ ಉದ್ದಟತನದ ಮಾತುಗಳು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದರು. ಜಿಲ್ಲಾ ಪಂಚಾಯಿತಿಗೆ ಬಂದಂತಹ ಅನುದಾನದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಹಣವನ್ನು ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರಾದ ಎಸ್.ಟಿ. ಸಮುದಾಯದವರಿಗೆ ನೀಡಿದ್ದು, ತುಂಬಾ ಬೇಸರವಾಗಿದೆ. ಇದೇ ಕೆಲಸವನ್ನು ನಿಷ್ಠಾವಂತ ಕಾಂಗ್ರೆಸ್ ಎಸ್.ಟಿ. ಸಮುದಾಯದವರಿಗೆ ನೀಡಿದ್ದರೂ ಸಮಾಧಾನವಾಗುತ್ತಿತ್ತು. ಅದೇ ರೀತಿ ಎಸ್.ಸಿ. ಸಮುದಾಯದ ಹಾಗೂ ಇತರೆ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಇದು ಇವರ ಪಕ್ಷದ ಬದ್ದತೆಯೇ? ಸಂಘಟನೆಯ ಬಲವರ್ಧನೆಯೇ? ಎಂದು ಪ್ರಶ್ನೆ ಮಾಡಿದರು.

ಜಿಲ್ಲೆಯ ಹಿರಿಯ ಕಾಂಗ್ರೆಸ್ ಕಟ್ಟಾಳು ಮಾಜಿ ಸಚಿವರಾದ ಬಿ. ಶಿವರಾಂ ರವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಮಾತನಾಡಿರುವುದು ಜಿಲ್ಲೆಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ. ಇವರಿಗೆ ಉಸ್ತುವಾರಿ ಕೊಟಿರುವುದು ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ತೇಜೋವಧೆ ಮಾಡಲೋ ಅಥವಾ ಪಕ್ಷ ಸಂಘಟಿಸಲೋ? ಇದರಿಂದ ಇವರ ಪಕ್ಷದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಶಿವರಾಮು ರವರು ಎಂದೂ ಕಾರ್ಯಕರ್ತರ, ಪಕ್ಷದ ಸಂಘಟನೆಯಲ್ಲಿ ಹಿಂದೆ ಸರಿದವರಲ್ಲ. ಇಂತಹ ನಿಷ್ಠಾವಂತ ಕಾಂಗ್ರೆಸ್ ನಾಯಕರು ಇರುವುದರಿಂದಲೇ ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಉಳಿದಿರುವುದು. ಆದ್ದರಿಂದ ಸಚಿವರು ಕೂಡಲೇ ಬಿ.ಶಿವರಾಮುರವರನ್ನು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು. ಈ ನಡವಳಿಕೆಯ ವರ್ತನೆಯ ಬಗ್ಗೆ ಹೈಕಮಾಂಡ್ ಗೆ ದೂರು ನೀಡಲು ಮುಂದಾಗಿದ್ದೇವೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದಂತಹ ಹೆಚ್.ಸಿ. ಮಹಾದೇವಪ್ಪ ಅವರು ಪ್ರತಿ ಸಮುದಾಯಗಳಿಗೂ ಹಣ ನೀಡಿದ್ದರು. ಜಿಲ್ಲೆಯಲ್ಲಿ ಅಹಿಂದ ವರ್ಗದ ಮತಗಳು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದು, ಪಕ್ಷದ ಸಂಘಟನೆಗೆ ಅಹಿಂದ ವರ್ಗದ ಮುಖಂಡರನ್ನು ತೊಡಗಿಸಿಕೊಂಡು ಸರ್ಕಾರ ಬಂದಾಗ ಅಧಿಕಾರ ಹಂಚಿಕೆಯಲ್ಲಿ ಅಹಿಂದ ವರ್ಗದ ಮುಖಂಡರನ್ನು ಕಡೆಗಣಿಸುತ್ತಿರುವುದು ವಿಷಾದನೀಯ ಎಂದರು. ಈ ರೀತಿ ಬೆಳವಣಿಗೆ ಮುಂದುವರೆದರೆ ಇದರ ಬಗ್ಗೆಯೂ ಹೈಕಮಾಂಡ್ ಗೆ ದೂರು ನೀಡಿ ಮನವರಿಕೆ ಮಾಡಿಕೊಡಲಾಗುವುದು. ಜಿಲ್ಲೆಯ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರಿಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಈ ಪತ್ರಿಕಾ ಗೋಷ್ಠಿ ಮೂಲಕ ರಾಜ್ಯ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಮಹಾಂತಪ್ಪ ಯಾರು ಕಾಂಗ್ರೆಸ್ ಕಾರ್ಯಕರ್ತರಾ.. ಒಂದು ದಿನವು ಕೂಡ ಕಾಂಗ್ರೆಸ್ ಕಛೇರಿಗೆ ಬಂದಿಲ್ಲ. ಆ ಮನುಷ್ಯ ಎಲ್ಲಾ ಪಾರ್ಟಿಯಲ್ಲೂ ಇರುತ್ತಾರೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಈ ಜಿಲ್ಲೆಯ ಅಹಿಂದ ವರ್ಗಕ್ಕೆ ನ್ಯಾಯ ಒದಗಿಸಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಅಮೀರ್ ಜಾನ್, ವೃತ್ತಿಪರ ಘಟಕದ ಜಿಲ್ಲಾಧ್ಯಕ್ಷ ಅಡಗೂರು ವೆಂಕಟೇಶ್, ಮೀನುಗಾರ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಎಸ್. ಸತೀಶ್, ಕಾಂಗ್ರೆಸ್ ಪರಿಶಿಷ್ಟ ಪಂಗಡದ ರಾಜ್ಯ ಕಾರ್ಯದರ್ಶಿ ಶೇಖರ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ರವಿ ಇತರರು ಉಪಸ್ಥಿತರಿದ್ದರು
Hassan
ಕ್ರಿಶ್ಚಿಯನ್ ಹೆಸರಿನಲ್ಲಿ ಹಿಂದೂ ಜಾತಿಗಳ ವಿಭಜನೆಯಿಂದ ಗೊಂದಲ ಉಂಟಾಗಿದೆ: ಹೆಚ್. ವಿ. ಹರೀಶ್
ಹಾಸನ: ಕ್ರಿಶ್ಚಿಯನ್ ಹೆಸರಿನಲ್ಲಿ ಹಿಂದೂ ಜಾತಿಗಳ ವಿಭಜನೆಯಿಂದ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಕ್ರಿಶ್ಚಿಯನ್ ಎಂಬುದನ್ನು ತಕ್ಷಣವೇ ರದ್ದು ಮಾಡಬೇಕೆಂದು ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಇದೇ ತಿಂಗಳ 22 ರಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಸಮಾಜ ಭಾಂದವರು ಜಾತಿ ಗಣತಿಗೆ ಗಣತಿದಾರರು ಬಂದಾಗ ಕಡ್ಡಾಯವಾಗಿ ಯಾವುದೇ ಉಪ ಜಾತಿಗಳನ್ನು ಬರೆಸದೇ ಕೇವಲ ‘ವಿಶ್ವಕರ್ಮ’ ಎಂದು ಬರೆಸಿ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
Hassan
ಶಿಕ್ಷಕರು ಹಾಗೂ ಕಛೇರಿಗಳ ನಡುವೆ ಸೌಹಾರ್ಧಯುತವಾಗಿ ಸ್ಪಂದಿಸಲಿ ಅಭಿನಂದನಾ ಸಮಾರಂಭದಲ್ಲಿ ಕೆ.ಎನ್. ಬಲರಾಮ್ ಶುಭ ಹಾರೈಕೆ
ಹಾಸನ: ಶಿಕ್ಷಕರಾಗಿರಲಿ, ಪದಾಧಿಕಾರಿಗಳಾಗಲಿ ಸದಕಾಲ ಚೈತ್ರಾ ಮಂಜೇಗೌಡರು ಸ್ಪಂದಿಸುತ್ತಿರುವುದನ್ನು ಅನೇಕ ವರ್ಷಗಳಿಂದಲೂ ನಾವು ನೋಡುತ್ತಾ ಬಂದಿದ್ದು, ಈಗ ಪ್ರಥಮ ಮಹಿಳೆಯಾಗಿ ಅಧ್ಯಕ್ಷರಾಗಿದ್ದಾರೆ. ಶಿಕ್ಷಕರು ಹಾಗೂ ಕಛೇರಿಗಳ ನಡುವೆ ಸೌಹಾರ್ಧಯುತವಾಗಿ ಸ್ಪಂದಿಸಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪಾನಿರ್ದೇಶಕ ಕೆ.ಎನ್. ಬಲರಾಮ್ ಶುಭ ಹಾರೈಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ವಚನ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಬಳಗ, ಜಿಲ್ಲೆಯ ಶಿಕ್ಷಕ ಸ್ನೇಹಿತರು, ಹಿತೈಸಿಗಳು ಹಾಗೂ ರವಿ ನಾಕಲಗೂಡು ಆತ್ಮೀಯರ ಬಳಗ ಹಾಗೂ ಹಲವು ಸಂಘ-ಸಂಸ್ಥೆಗಳ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಚೈತ್ರಾ ನಾಯಕರಹಳ್ಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಶಿಕ್ಷಣವನ್ನು ಉತ್ತಮಪಡಿಸುವುದಕ್ಕೆ ಕಾರ್ಯಕ್ರಮಗಳನ್ನು ಸಂಘದ ಮೂಲಕ ಆಯೋಜಿಸಬೇಕು.
ಶಿಕ್ಷಕರ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೋ ಅದೆ ರೀತಿ ಮಕ್ಕಳ ಕಲಿಕೆ ಬಗ್ಗೆಯೂ ಕೂಡ ಗಮನ ನೀಡಬೇಕು. ಚೈತ್ರಾ ಅವರ ತಂದೆಯೇ ಶಿಕ್ಷಕರಾಗಿದ್ದು, ಅವರಿಂದಲೇ ಶಿಕ್ಷಣ ಸೇವೆಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ಅಧ್ಯಕ್ಷೆಯ ಹುದ್ದೆಯನ್ನು ನಿಭಾಯಿಸುವ ಸಾಮರ್ಥ್ಯ, ಸಂಘಟನಾ ಶಕ್ತಿ ಹಾಗೂ ಹೃದಯಪೂರ್ವಕ ಬೋಧನೆ ಇವರಲ್ಲಿದೆ.

ಮಕ್ಕಳಿಗೆ ಯಾವಾಗಲೂ ಸ್ಪಂದಿಸುತ್ತಾರೆ. ಶಿಕ್ಷಕರು ಮತ್ತು ಕಚೇರಿ ನಡುವೆ ಸ್ನೇಹಸಂಬಂಧ ಉಳಿಸಿಕೊಳ್ಳುತ್ತಾರೆ. ಶಿಕ್ಷಕರ ಹಕ್ಕು-ಹಿತಗಳ ಹೋರಾಟಕ್ಕೂ ಮಕ್ಕಳ ಗುಣಮಟ್ಟದ ಕಲಿಕೆಗೆ ಸಹ ಒತ್ತು ನೀಡಬೇಕು. ಅವರ ಶ್ರಮಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಭವಿಷ್ಯದಲ್ಲಿ ಅವರು ರಾಜ್ಯ ಮಟ್ಟದ ನಾಯಕತ್ವ ವಹಿಸುವಂತಾಗಲಿ ಎಂದು ಹಾರೈಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಹೆಚ್.ಬಿ. ಮದನಗೌಡ ಮಾತನಾಡಿ, ಬೋಧನೆಯಲ್ಲಿ ಮಕ್ಕಳ ಧ್ಯಾನವನ್ನು ಬಿತ್ತುವ ಕೆಲಸ ಮಾಡುವ ಜೊತೆಗೆ ಸಾಮಾಜಿಕ ಕಳಾಕಳಿ ಇಟ್ಟುಕೊಂಡು ಜಿಲ್ಲಾ ವಚನ ಸಾಹಿತ್ಯ ಪರಿಷತ್ತನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವಲ್ಲಿ ಚೈತ್ರಾ ಮಂಜೇಗೌಡರ ಪಾತ್ರ ಬಹಳಷ್ಟಿದೆ.
ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹುದ್ದೆ ಇನ್ನಷ್ಟು ಪ್ರಭಾವಶಾಲಿಯಾಗಿ ಬೆಳೆಯಬೇಕು ಎಂದರು. ತನ್ನ ವೃತ್ತಿಯಲ್ಲಿ ಯಾವ ಕುಂದು ಬಾರದ ರೀತಿ ನಿರ್ವಹಿಸಿಕೊಂಡು ಬಂದಿದ್ದಾರೆ. ಕೆಲಸದಲ್ಲಿ ಶ್ರದ್ಧೆ ಹೆಚ್ಚಿದ್ದು, ಅವರ ಸೇವೆ ಇನ್ನಷ್ಟು ಹೆಚ್ಚಿನ ರೀತಿ ಸಿಗಲೆಂದು ಹಾರೈಸಿದರು.
ಆಶಯ ನುಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಪ್ರಪ್ರಥಮವಾಗಿ ಜಿಲ್ಲಾ ಶಿಕ್ಷಕರ ಸಂಘದ ಮಹಿಳಾ ಅಧ್ಯಕ್ಷರಾಗಿದ್ದಾರೆ. ಕಳೆದ ೬೦ ವರ್ಷಗಳಿಂದಲೂ ಜಿಲ್ಲೆಯ ಯಾವುದೇ ಶಿಕ್ಷಕಿಯರು ಸಂಘದ ಅಧ್ಯಕ್ಷರಾಗಿರಲಿಲ್ಲ. ಚೈತ್ರಾ ಅವರಿಗೆ ಅದೃಷ್ಟದ ಜೊತೆಗೆ ಶ್ರಮದ ಫಲವಾಗಿ ಈ ಸ್ಥಾನ ದೊರಕಿದೆ. ಸಂಘಟನಾ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದು, ಹಲವಾರು ಏಳು ಬೀಳುವಿನೊಡನೆ ಅವರಿಗೆ ಸ್ಥಾನ ಸಿಕ್ಕಿದೆ. ಜಿಲ್ಲೆಯ ಶಿಕ್ಷಕರ ಸಮಸ್ಯೆಗಳಿಗೆ ಕಿವಿಗೊಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಚೈತ್ರ ನಾಯಕರಹಳ್ಳಿ ಅವರಿಗೆ ನೆರೆದಿದ್ದವರು ಸನ್ಮಾನಿಸಿ ಅಭಿನಂದಿಸಿದರು.
ಇದೆ ವೇಳೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಜಿಲ್ಲಾ ಪ್ರೌಢಶಾಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಜೆ.ಆರ್. ಕೆಂಚೇಗೌಡ, ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ. ಅಬ್ದುಲ್ ಬಷೀರ್, ವಿ.ಎಸ್. ರಾಣಿ, ಜಯಲಕ್ಷ್ಮಿ ರಾಜಣ್ಣ, ಅಣ್ಣಪ್ಪ, ರಾಜೇಂದ್ರ, ದ್ಯಾವೇಗೌಡ, ಡಾ. ದಿನೇಶ್, ಕಟ್ಟಾಯ ಶಿವಕುಮಾರ್, ನಾಯಕರಹಳ್ಳಿ ಮಂಜೇಗೌಡ, ಕಲ್ಲಹಳ್ಳಿ ಹರೀಶ್, ಸೋಮನಾಯಕ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಗುಡಗನಹಳ್ಳಿ ಮಂಜುನಾಥ್ ಇತರರು ಉಪಸ್ಥಿತರಿದ್ದರು.
Hassan
ಸೆ.23ಕ್ಕೆ ಎಸ್.ಡಿ.ಎಂ.ನಲ್ಲಿ ಅರ್ಥಪೂರ್ಣ ಹತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ಡಾ. ಶೈಲಜಾ
ಹಾಸನ: ನಗರದ ತಣ್ಣೀರುಹಳ್ಳ ಬಳಿ ಇರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಸೆಪ್ಟೆಂಬರ್. 23ರಂದು ಹತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಭವ್ಯವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಶೈಲಜಾ ಉಪ್ಪಿನಕುದುರು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಅವರು ಮಾತನಾಡಿ, 2016 ರಿಂದ ಭಾರತ ಸರ್ಕಾರದ ಆಯುಷ್ ಸಚಿವಾಲಯವು ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯನ್ನು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಎಂದು ಆಚರಿಸಲು ನಿರ್ಧರಿಸಿತು. ಈ ದಿನವೇ ಸಮುದ್ರಮಂಥನ ಸಂದರ್ಭದಲ್ಲಿ ಭಗವಾನ್ ಧನ್ವಂತರಿ ಅವತರಿಸಿ ಆಯುರ್ವೇದ ವಿಜ್ಞಾನವನ್ನು ಭೂಲೋಕಕ್ಕೆ ತಂದುಕೊಟ್ಟರು ಎಂಬ ಪುರಾಣ ಪ್ರಸಿದ್ಧಿ ಇದೆ. ಉತ್ತರ ಭಾರತದಲ್ಲಿ ಇದೇ ದಿನವನ್ನು ದಂತೇರಸ್ ಎಂದು ಆಚರಿಸಿ ಧನ್ವಂತರಿಯನ್ನು ಆರಾಧಿಸುವ ಸಂಪ್ರದಾಯವಿದೆ. ಆದ್ದರಿಂದ ಈ ದಿನಕ್ಕೆ ವಿಶೇಷ ಪಾವಿತ್ರ್ಯವಿದೆ ಎಂದರು.

ಆದರೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ದಿನ ಬರುವುದರಿಂದ ಜನಸಾಮಾನ್ಯರಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೊಂದರೆ ಆಗುತ್ತಿತ್ತು. ಅದಕ್ಕಾಗಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿಯಿಂದ ಪ್ರತಿ ವರ್ಷ ಸೆಪ್ಟೆಂಬರ್ .23ರನ್ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಎಂದು ಆಚರಿಸಬೇಕೆಂದು ಘೋಷಿಸಿದ್ದಾರೆ.
ಜನರಿಗಾಗಿ ಮತ್ತು ಭೂಗ್ರಹಕ್ಕಾಗಿ ಆಯುರ್ವೇದ ಈ ಘೋಷವಾಕ್ಯದ ಮೂಲಕ ಆಯುರ್ವೇದವನ್ನು ಜನಜೀವನದಲ್ಲಿ ಅಳವಡಿಸಿಕೊಂಡರೆ ವೈಯಕ್ತಿಕ ಆರೋಗ್ಯ ಸುಧಾರಣೆ ಮಾತ್ರವಲ್ಲದೆ ಪರಿಸರ ಮಾಲಿನ್ಯ, ಜಾಗತಿಕ ತಾಪಮಾನವೃದ್ಧಿ ಮುಂತಾದ ವಿಶ್ವಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂಬ ಸಂದೇಶ ಸಾರಲಾಗುತ್ತಿದೆ ಎಂದು ಅವರು ವಿವರಿಸಿದರು. ಈ ಬಾರಿಯ ಹತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಅತ್ಯಂತ ಅರ್ಥಪೂರ್ಣವಾಗಿ, ವಿಭಿನ್ನ ಚಟುವಟಿಕೆಗಳ ಮೂಲಕ ಆಚರಿಸುತ್ತಿದೆ. ಸೆಪ್ಟೆಂಬರ್.12 ರಿಂದಲೇ ಪ್ರಾರಂಭವಾದ ೨೦ಕ್ಕೂ ಹೆಚ್ಚು ಚಟುವಟಿಕೆಗಳು ತಿಂಗಳ ಕೊನೆವರೆಗೂ ನಡೆಯುತ್ತಿವೆ.

ಯೋಗ ತರಬೇತಿ ಶಿಬಿರಗಳು ?
ವಿದ್ಯಾರ್ಥಿಗಳಿಗಾಗಿ ಆರೋಗ್ಯಕರ ಜೀವನಶೈಲಿ ಕುರಿತು ಪ್ರಾಯೋಗಿಕ ತರಬೇತಿ.
ಆಯುರ್ವೇದ ಆಹಾರ ತಯಾರಿಕೆ ?
ಸಾಂಪ್ರದಾಯಿಕ ಹಾಗೂ ಪೌಷ್ಠಿಕತೆಯ ಆಹಾರಗಳ ಪರಿಚಯ.
ಪ್ರಾತ್ಯಕ್ಷಿಕೆಗಳು ?
ವಿವಿಧ ಚಿಕಿತ್ಸಾ ಕ್ರಮಗಳ ನೇರ ಪ್ರದರ್ಶನ, ವಿಶೇಷ ಉಪನ್ಯಾಸಗಳು ? ಆಯುರ್ವೇದ ತಜ್ಞರಿಂದ ಉಪಯುಕ್ತ ವಿಷಯಗಳ ಬಗ್ಗೆ ಉಪನ್ಯಾಸ.
ಭಿತ್ತಿಪತ್ರ ಸ್ಪರ್ಧೆಗಳು ?
ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಉತ್ತೇಜಿಸುವ ಸಾಂಸ್ಕೃತಿಕ ಚಟುವಟಿಕೆ.
ವಸ್ತುಪ್ರದರ್ಶನ ?
ಸೆ.13 ರಿಂದ 23 ರವರೆಗೆ ಆಯುರ್ವೇದದ ಉಪಯುಕ್ತ ಅಂಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವಿಶಾಲ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ.
ಸ್ಥಳ: ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆ ಕಟ್ಟಡದ ಮುಂಭಾಗ ಸಮಯ: ಬೆಳಿಗ್ಗೆ .9 ರಿಂದ ಸಂಜೆ ೫ರವರೆಗೆ ದಿನಾಂಕ: ಸೆಪ್ಟೆಂಬರ್.13 ರಿಂದ 23 ರವರೆಗೂ ಲಭ್ಯವಿದೆ. ಇದಲ್ಲದೆ ಸಂಸ್ಥೆಯ ಯುವ ಸಂಶೋಧಕರು ಹಾಗೂ ಅನುಭವಿ ವೈದ್ಯರಿಂದ ಒಟ್ಟು 50 ಆರೋಗ್ಯ ಲೇಖನಗಳು ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರತಿದಿನ ಪ್ರಕಟವಾಗುತ್ತಿವೆ. ಹಾಸನ ಸುತ್ತಮುತ್ತಲಿನ ತಮಗಾನಹಳ್ಳಿ, ಶಂಕರನಹಳ್ಳಿ, ಕೋರವಂಗಲ, ದೇವೇಗೌಡನಗರ ಗ್ರಾಮಗಳಲ್ಲಿ ಸಂಸ್ಥೆಯ ವೈದ್ಯರು ತೆರಳಿ ಆರೋಗ್ಯ ಸಭೆಗಳನ್ನು ನಡೆಸುತ್ತಿದ್ದಾರೆ ಎಂದರು.

ಗ್ರಾಮಸ್ಥರಿಗೆ ಆಯುರ್ವೇದದ ಸರಳ ಆರೋಗ್ಯ ಸೂತ್ರಗಳ ಪರಿಚಯ ಶಾಲಾ ಮಕ್ಕಳೊಂದಿಗೆ ಆರೋಗ್ಯ ಸಂವಾದ ಈ ಗ್ರಾಮಮಟ್ಟದ ಜಾಗೃತಿ ಕಾರ್ಯಕ್ರಮಗಳು ಜನಸಾಮಾನ್ಯರಿಂದ ಉತ್ತಮ ಸ್ವೀಕಾರ ಪಡೆದಿವೆ. ಉಚಿತ ಆರೋಗ್ಯ ತಪಾಸಣೆ ಮತ್ತು ಶಿಬಿರವು ಸೆಪ್ಟೆಂಬರ್ ೨೮ ಭಾನುವಾರ ಬೆಳಿಗ್ಗೆ .10 ರಿಂದ ಸಂಜೆ 4 ರ ವರೆಗೂ ತಣ್ಣೀರುಹಳ್ಳ, ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆ ಇಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸಿಗಲಿದೆ. ಇದಲ್ಲದೆ ಸೆಪ್ಟೆಂಬರ್ .30 ರವರೆಗೆ ಆಸ್ಪತ್ರೆಯ ವಾರ್ಡ್ ದರದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕರು, ಉಪಪ್ರಾಂಶುಪಾಲರು ಡಾ. ಎಂ. ಅಶ್ವಿನಿಕುಮಾರ್, ಡಾ. ಚೇತನ್, ಡಾ. ಗುರುಬಸವರಾಜು ಸೇರಿದಂತೆ ಕಾಲೇಜಿನ ಹಲವು ಪ್ರಾಧ್ಯಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
-
State15 hours agoಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಜಿಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ 30,000ರೂ. ವಿದ್ಯಾರ್ಥಿವೇತನ
-
Hassan13 hours agoಪೆಂಡಲ್ ಗಣಪತಿ ೭೧ನೇ ವರ್ಷದ ವಿಸರ್ಜನ ಮಹೋತ್ಸವ ಮೆರವಣಿಗೆಗೆ ಅದ್ಧೂರಿ ಚಾಲನೆ
-
Mandya9 hours agoಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಕುರಿತು ವರದಿ ಸಲ್ಲಿಸಿ: ಆಶಿತ್ ಮೋಹನ್ ಪ್ರಸಾದ್
-
Manglore8 hours agoಧರ್ಮಸ್ಥಳದಲ್ಲಿ ರುದ್ರಪಾರಾಯಣ
-
Hassan10 hours ago19 ನೇ ವಾರ್ಡ್ ಅರಳೇಪೇಟೆ ನಿವಾಸಿಗಳಿಂದ ಪ್ರಸಾದ ವಿತರಣೆ
-
Hassan15 hours agoಪೆಂಡಲ್ ಗಣಪತಿ 71 ನೇ ವರ್ಷದ ವಿಸರ್ಜನ ಮಹೋತ್ಸವ ಮೆರವಣಿಗೆಗೆ ಅದ್ಧೂರಿ ಚಾಲನೆ
-
Mysore6 hours agoಜಾತಿ ಗಣತಿ ಸಮೀಕ್ಷೆಯಲ್ಲಿ ಗೆಜ್ಜಗಾರರೆಂದು ನಮೂದಿಸಿ : ಗೋಳೂರು ಸ್ನೇಕ್ ಬಸವರಾಜು ಮನವಿ
-
Kodagu9 hours agoಕೊಡವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ : ಬಿಜೆಪಿ ಮನವಿ
