Connect with us

Mandya

ಜೆಡಿಎಸ್‌ನಲ್ಲಿರುವ ‘ಜಾತ್ಯತೀತ’ ಪದ ತೆಗೆದು ಹಾಕಲಿ

Published

on

ಮಳವಳ್ಳಿ ಗ್ಯಾರಂಟಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ಮಳವಳ್ಳಿಯ ಅಭಿವೃದ್ಧಿಗೆ ಒತ್ತು ನೀಡಿರುವ ಪಿ.ಎಂ.ನರೇಂದ್ರಸ್ವಾಮಿ: ಮುಖ್ಯಮಂತ್ರಿ ಶ್ಲಾಘನೆ

ಮಂಡ್ಯ: ಜಾ.ದಳ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೋಮುವಾದಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜಾತೀಯತೆ ಒಪ್ಪಿಕೊಂಡಿದ್ದು, ಜಾತ್ಯತೀತ ಜನತಾದಳದಲ್ಲಿ ‘ಜಾತ್ಯತೀತ’ ಎನ್ನುವುದನ್ನು ತೆಗೆದು ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಎದುರಿನ ಪುರಸಭೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 486 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮುಸಲ್ಮಾನನಾಗಿ ಮುಂದಿನ ಜನುಮದಲ್ಲಿ ಹುಟ್ಟುತ್ತೇನೆ ಎಂದು ಹೇಳುತ್ತಿದ್ದ ಎಚ್.ಡಿ.ದೇವೇಗೌಡರು, ಇಂದು ತಮ್ಮ ಪಕ್ಷದ ಉಳಿವಿಗಾಗಿ ಕೋಮುವಾದಿ ಹಾಗೂ ಜಾತಿವಾದಿ ಬಿಜೆಪಿಯೊಂದಿಗೆ ಕೈ ಜೋಡಿಸಿ ತಮ್ಮ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಂದೆ ಬಿಟ್ಟಿದ್ದಾರೆ. ಹೀಗಿರುವಾಗ ‘ಜಾತ್ಯತೀತ’ ಎನ್ನಲು ಸಾಧ್ಯವಿಲ್ಲ, ಜಾ.ದಳದ ಶಾಸಕರು ಪಕ್ಷವನ್ನು ಬಿಡಲು ಹೊರಟಿದ್ದರು. ಇದನ್ನರಿತು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆಯೇ ಹೊರತು, ಅಭಿವೃದ್ಧಿಗಾಗಿ ಅಲ್ಲ ಎಂದು ಕಾಲೆಳೆದರು.

ಕಳೆದ ವಿಧಾನಸಭೆಯಲ್ಲಿ ನಮ್ಮ ಜತೆ ಕೈ ಜೋಡಿಸಿದ್ದರು, ಈಗಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸೇರಿದ್ದಾರೆ, ಸಲ್ಲಬೇಕಿರುವ ಜಿಎಸ್‌ಟಿಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು ಹೇಳುತ್ತಾರೆ. ಈ ದ್ರೋಹದ ವಿರುದ್ಧ ಅವರಿಗೆ ಪಾಠ ಕಲಿಸಬೇಕು ಎಂದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕಳೆದ ಚುನಾವಣೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಎಂಟು ತಿಂಗಳಲ್ಲಿ ಜಾರಿ ಮಾಡಿ ಭರವಸೆ ಈಡೇರಿಸಿದ್ದೇವೆ. ಬಿಜೆಪಿ, ಜಾ.ದಳದವರಂತೆ ನಾವು ಮಾತಿಗೆ ತಪ್ಪುವವರಲ್ಲ. ಗ್ಯಾರಂಟಿ ಯೋಜನೆಗಳಿಗೆ 57 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಬಜೆಟ್ ಪುಸ್ತಕದಲ್ಲಿ ನಮೂದಾಗಿದ್ದು, ಮಿಸ್ಟರ್ ಅಶೋಕ, ಮಿಸ್ಟರ್ ಬೊಮ್ಮಾಯಿ ಅವರೇ ಬಜೆಟ್ ಪುಸ್ತಕ ಓದಿ, ಜೂ.11 ರಿಂದ ಈವರೆಗೆ ಶಕ್ತಿ ಯೋಜನೆಯಡಿ 155 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರತಿದಿನ 60 ಲಕ್ಷ ಮಹಿಳೆಯರು ಓಡಾಡುತ್ತಿದ್ದಾರೆ, ಇದು ತಪ್ಪಾ ಎಂದು ಕಿಡಿಕಾರಿದರು.

ಜನರು ಹಸಿದು ಮಲಗಬಾರದು, ರಾಜ್ಯ ಹಸಿವು ಮುಕ್ತವಾಗಬೇಕೆಂದು ಅನ್ನಭಾಗ್ಯ ಜಾರಿ ಮಾಡಲಾಯಿತು. ಬಡವರಿಗೆ ಅಕ್ಕಿ ನೀಡದ ಕೇಂದ್ರದ ಬಿಜೆಪಿಗೆ ಜನರು ಮತ ಹಾಕಬಾರದು. ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಟೀಕಿಸಿದ್ದರು. ನಾನು ಮಂಡಿಸಿದ ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ಇಡಲಾಗಿದೆ. 8 ತಿಂಗಳ ಅವಧಿಯಲ್ಲಿ ಎಲ್ಲ 5 ಗ್ಯಾರಂಟಿಗಳನ್ನು ಸರ್ಕಾರ ಜಾರಿ ಮಾಡಿದೆ, 2013-18 ರವರೆಗಿನ ನಮ್ಮ ಅವಧಿಯಲ್ಲಿ ಹೆಚ್ಚಿನ ಭರವಸೆಗಳನ್ನು ಈಡೇರಿಸಿದ್ದೆವು ಎಂದರು.

ಬಿಜೆಪಿ ಹಾಗೂ ಜಾ.ದಳದಂತೆ ಸುಳ್ಳು ಹೇಳದೆ, ಕಾಂಗ್ರೆಸ್ ಪಕ್ಷ ಜನರಿಗಾಗಿ ಕೈಗೊಂಡಿರುವ ಕಾರ್ಯಕ್ರಮದ ಸತ್ಯದ ಆಧಾರದ ಮೇಲೆ ಮತ ಕೇಳಿದರೆ ಜನತೆ ಮತ ನೀಡಲಿದ್ದಾರೆ ಎಂಬುದಕ್ಕೆ ಕಳೆದ ವಿಧಾನಸಭಾ ಚುನಾವಣೆಯೇ ಸಾಕ್ಷಿಯಾಗಿದ್ದು, ಶಾಸಕರು ಸತ್ಯ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಿ ಮತ ಕೇಳಿ ಎಂಬ ಮಾತನ್ನು ಸಚಿವರು ಹಾಗೂ ಶಾಸಕರಿಗೆ ಹೇಳುವ ಮೂಲಕ ಕರೆ ನೀಡಿದರು.

ಆರು ವರ್ಷಗಳ ಹಿಂದೆ 593 ಕೋಟಿ ರೂ. ವೆಚ್ಚದ ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೆ. ಇದೀಗ ಅಂತಿಮ ಹಂತದಲ್ಲಿರುವ ಯೋಜನೆಯನ್ನು ನಾನೇ ಉದ್ಘಾಟಿಸುವೆ, ಕ್ಷೇತ್ರದ ಅಭಿವೃದ್ಧಿ ಸಂಬಂಧ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಸಲ್ಲಿಸಿರುವ ಮನವಿಯನ್ನು ಸ್ವೀಕರಿಸುತ್ತೇನೆ. ಅವರು ಕೇಳಿರುವ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಳವಳ್ಳಿ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದಾರೆ. ಅದಕ್ಕೆ ಇಂದಿನ ಸಮಾವೇಶವೇ ಸಾಕ್ಷಿಯಾಗಿದೆ. ಎಲ್ಲ ಸಚಿವರೊಂದಿಗೆ ಉತ್ತಮ ಸ್ನೇಹ-ಸಂಬಂಧ ಹೊಂದಿದ್ದಾರೆ. ಅದನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಾರೆ. ಅಷ್ಟು ಸಾಮರ್ಥ್ಯ ಅವರಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Continue Reading
Click to comment

Leave a Reply

Your email address will not be published. Required fields are marked *

Mandya

ಕಾಂಗ್ರೆಸ್ ಪಕ್ಷದಿಂದ ಬೈಕ್ ರ್‍ಯಾಲಿ

Published

on

ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಎರು ಮಂಡ್ಯದಲ್ಲಿ ಬೈಕ್ ರ್‍ಯಾಲಿ ಮೂಲಕ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಜೊತೆಗೂಡಿ ಕೊನೆಯ ದಿನದ ಪ್ರಚಾರ ಮಾಡಿದರು.

ನಗರದ ಕಾರಿಮನೆ ಗೇಟ್ ನಿಂದ ಬೈಕ್ ರ್‍ಯಾಲಿ ಮೂಲಕ ಪ್ರಚಾರ ಆರಂಭಿಸಿದ ಕಾಂಗ್ರೆಸ್ ನಾಯಕರು, ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಜಯ ಚಾಮರಾಜೇಂದ್ರ ಒಡೆಯರ್ ವೃತ್ತ, ಆರ್ ಪಿ ರಸ್ತೆ, ಅಂಬೇಡ್ಕರ್ ರಸ್ತೆ ಯಲ್ಲಿ ಮತಯಾಚಿಸಿ ಹೊಸಹಳ್ಳಿಯಲ್ಲಿ ಪ್ರಚಾರ ಮಾಡಿದರು.

ಕಾಂಗ್ರೆಸ್ ಪಕ್ಷ ಜನರ ಪರವಾದ ಪಕ್ಷವಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಜನತೆಗೆ ಸವಲತ್ತು ದೊರಕಿಸಿಕೊಟ್ಟಿದೆ, ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Continue Reading

Mandya

ಕುಮಾರಸ್ವಾಮಿ ಪರ ಮತ ಪ್ರಚಾರ

Published

on

ಭಾರತೀನಗರ :ಕೆ.ಎಂ.ದೊಡ್ಡಿಯಲ್ಲಿನ 1 ಮತ್ತು 2ನೇ ಬ್ಲಾಕ್ನಲ್ಲಿ ಜಾ.ದಳ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಎನ್.ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಪ್ರತೀ ಮನೆಯಲ್ಲಿ ಮತದಾರರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟ ಕೊಡುಗೆಗಳ ಹಾಗೂ ಅಭಿವೃದಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ರೈತರ ಉದ್ಧಾರಕ್ಕೋಸ್ಕರ ಸಾಲ ಮನ್ನಾ ಮಾಡಿದ್ದರು. ಹಾಗಾಗಿ ಕುಮಾರಸ್ವಾಮಿ ಅವರ ತೆನೆ ಹೊತ್ತ ಮಹಿಳೆ ಗುರುತಿಗೆ ಮತ ನೀಡುವ ಮೂಲಕ ಅತ್ಯಧಿಕ ಮತಗಳಿಂದ ಜಯಗಳಿಸುವಂತೆ ಮಾಡಬೇಕೆಂದು ಮನವಿ ಮಾಡಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ಜನತೆಯ ಹಿತಕಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ರೈತರ ಶ್ರೇಯೋಬಿವೃದ್ಧಿ ಹಿನ್ನೆಯಲ್ಲಿಯೂ ಕೂಡ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಮತದಾರರಿಗೆ ತಿಳಿಸಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಪ್ರದಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ್, ಮುಖಂಡರಾದ ಮೊಬೈ ವೆಂಕಟೇಶ್, ಕುಮಾರ್ , ರವಿ, ವಿಶ್ವ ಶ್ರೀನಿವಾಸ್, ಪುನೀತ್, ವಿಕಾಸ್ (ಬೋರ), ಪ್ರಶಾಂತ್, ಲಕ್ಷ್ಮಮ್ಮ, ರಂಗಮ್ಮ ಮುಂತಾದವರುಗಳು ಭಾಗವಹಿಸಿದ್ದರು

Continue Reading

Mandya

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,79,243 ಮತದಾರರು: ಡಾ.ಕುಮಾರ

Published

on

ಮಂಡ್ಯ: ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಯಂತೆ 17,79,243 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ಮಳವಳ್ಳಿಯಲ್ಲಿ ಗಂಡು-126118 ಹೆಣ್ಣು-127487, ತೃತೀಯ ಲಿಂಗಿಗಳು-23, ಒಟ್ಟು 253628 ಮತದಾರರಿದ್ದಾರೆ.

ಮದ್ದೂರಿನಲ್ಲಿ ಗಂಡು-104280, ಹೆಣ್ಣು-111443, ತೃತೀಯ ಲಿಂಗಿಗಳು-22, ಒಟ್ಟು 215745 ಮತದಾರರಿದ್ದಾರೆ.

ಮೇಲುಕೋಟೆಯಲ್ಲಿ ಗಂಡು-100379, ಹೆಣ್ಣು-103010, ತೃತೀಯ ಲಿಂಗಿಗಳು-9, ಒಟ್ಟು 203398 ಮತದಾರರಿದ್ದಾರೆ.

ಮಂಡ್ಯದಲ್ಲಿ ಗಂಡು-111868, ಹೆಣ್ಣು-117759, ತೃತೀಯ ಲಿಂಗಿಗಳು- 36, ಒಟ್ಟು 229663 ಮತದಾರರಿದ್ದಾರೆ.

ಶ್ರೀರಂಗಪಟ್ಟಣ ಗಂಡು-106157, ಹೆಣ್ಣು-111431, ತೃತೀಯ ಲಿಂಗಿಗಳು- 44, ಒಟ್ಟು 217632 ಮತದಾರರಿದ್ದಾರೆ.

ನಾಗಮಂಗಲದಲ್ಲಿ ಗಂಡು-107760, ಹೆಣ್ಣು-108783, ತೃತೀಯ ಲಿಂಗಿಗಳು- 11, ಒಟ್ಟು 216554 ಮತದಾರರಿದ್ದಾರೆ.

ಕೃಷ್ಣರಾಜಪೇಟೆಯಲ್ಲಿ ಗಂಡು-111542 ಹೆಣ್ಣು-112284 ತೃತೀಯ ಲಿಂಗಿಗಳು- 11, ಒಟ್ಟು 223837 ಮತದಾರರಿದ್ದಾರೆ.

ಕೆ. ಆರ್ ನಗರದಲ್ಲಿ ಗಂಡು-108008, ಹೆಣ್ಣು-110766, ತೃತೀಯ ಲಿಂಗಿಗಳು- 12, ಒಟ್ಟು 218786 ಮತದಾರರಿದ್ದಾರೆ.

2076 ಮತಗಟ್ಟೆಗಳು
ಮತದಾನಕ್ಕಾಗಿ 2076 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಮಳವಳ್ಳಿ- 272, ಮದ್ದೂರು-254, ಮೇಲುಕೋಟೆ-264, ಮಂಡ್ಯ-264, ಶ್ರೀರಂಗಪಟ್ಟಣ-249, ನಾಗಮಂಗಲ-260, ಕೃಷ್ಣರಾಜಪೇಟೆ-261, ಕೆ. ಆರ್ ನಗರ-252 ಮತಗಟ್ಟೆಗಳಿವೆ ಎಂದರು.

1120 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್
ಮಳವಳ್ಳಿ – 137, ಮದ್ದೂರು – 127, ಮೇಲುಕೋಟೆ – 192, ಮಂಡ್ಯ – 131, ಶ್ರೀರಂಗಪಟ್ಟಣ – 125, ನಾಗಮಂಗಲ – 150, ಕೃಷ್ಣರಾಜಪೇಟೆ – 132, ಕೆ. ಆರ್. ನಗರ – 126, ಒಟ್ಟು – 1120 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅನ್ನು ಅಳವಡಿಸಲಾಗುವುದು ಎಂದರು.

ಮತದಾನವು ಏಪ್ರಿಲ್ 26 ರಂದು ನಡೆಯಲಿದ್ದು, ಸ್ಥಳೀಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರು, ಕಾರ್ಯಕರ್ತರು, ಸ್ಟಾರ್ ಕ್ಯಾಂಪೇನರ್ಸ್ಗಳು, ಮೆರವಣಿಗೆ ಆಯೋಜಕರು ಸೇರಿದಂತೆ ಮತ್ತಿತರರು ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಈಗಾಗಲೇ ಸಂಬಂಧಪಟ್ಟ ಸಹಾಯ ಚುನಾವಣಾ ಅಧಿಕಾರಿಗಳಿಗೆ ಮತ್ತು ಆಯಾ ತಹಶಿಲ್ದಾರ್ ರವರಿಗೆ ಸೂಚನೆ ನೀಡಲಾಗಿದೆ ಎಂದರು.

ಮತದಾನದ ಕೊನೆಯ 48 ಗಂಟೆ ಅವಧಿಗೆ ಒಬ್ಬ ಅಭ್ಯರ್ಥಿಗೆ ಮೂರು ವಾಹನಗಳು ಮಾತ್ರ ಬಳಕೆಗೆ ಅವಕಾಶವಿರುತ್ತದೆ. ಅಭ್ಯರ್ಥಿಯ ಅನುಪಸ್ಥಿತಿಯಲ್ಲಿ ಅಭ್ಯರ್ಥಿಗೆ ನೀಡಿದ ವಾಹನವನ್ನು ಇತರರು ಉಪಯೋಗಿಸುವಂತಿಲ್ಲ. ಅನುಮತಿಸಿದ ವಾಹನಗಳಲ್ಲಿ ಐದು ಜನಕ್ಕಿಂತ ಹೆಚ್ಚು ಜನರು ಪ್ರಯಾಣಿಸತಕ್ಕದ್ದಲ್ಲ. ಈ ಅವಧಿಯಲ್ಲಿ 5 ಜನಕ್ಕಿಂತ ಹೆಚ್ಚಿನ ಜನ ಸೇರದಂತೆ ಸಿ.ಆರ್. ಪಿ.ಸಿ ಕಲಂ 144 ರಡಿ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದರು.

ಮತಗಟ್ಟೆಯ 100 ಮೀಟರ್ ಅಂತರದೊಳಗೆ ಮೊಬೈಲ್ ಬಳಕೆ ನಿಷೇಧವಿದೆ ಹಾಗೂ ಎಲ್ಲಾ ರೀತಿಯ ಪ್ರಚಾರ ನಿರ್ಬಂಧಿಸಿದೆ. ಮತಗಟ್ಟೆಯಿಂದ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಟೆಂಟ್ ಗಳನ್ನು ತೆರೆಯುವಂತಿಲ್ಲ ಹಾಗೂ ಮತಗಟ್ಟೆಯ 200 ಮೀ. ನಿಂದ ಹೊರಗೆ ತಾತ್ಕಾಲಿಕ ಬೂತ್ ತೆರೆಯಲು ಬಯಸಿದ್ದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ಹಾಗೂ ಸಂಬಂಧಪಟ್ಟ ಸಹಾಯಕ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಈ ಟೆಂಟ್ ನಲ್ಲಿ ಕೇವಲ ಇಬ್ಬರು ಕಾರ್ಯಕರ್ತರಿಗೆ ಸಾಕಾಗುವಷ್ಟು ಟಾರ್ಪಲಿನ್ ಅಥವಾ ಛತ್ರಿ ಮೇಲ್ಚಾವಣಿ ಹೊಂದಬಹುದಾಗಿದ್ದು, 2 ಕುರ್ಚಿ ಮತ್ತು ಮೇಜು ಹೊಂದಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ರಾಜಕೀಯ ಅಭ್ಯರ್ಥಿಗಳು ಮತದಾನದ ಅಂತ್ಯದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ. ಧ್ವನಿ ವರ್ಧಕಗಳ ಬಳಕೆ ಮಾಡಲು ಅವಕಾಶವಿಲ್ಲ ಆದರೆ ಮನೆಮನೆ ಭೇಟಿಗೆ ಅವಕಾಶವಿರುತ್ತದೆ.

ಪ್ರತಿ ಮತಗಟ್ಟೆಗೆ ಒಬ್ಬ ಪೋಲಿಂಗ್ ಏಜೆಂಟ್ ಅನ್ನು ಹಾಗೂ ಇಬ್ಬರು ರಿಲೀಫ್ ಏಜೆಂಟ್ ಅನ್ನು ನೇಮಕ ಮಾಡಲು ಅವಕಾಶವಿರುತ್ತದೆ. ಇವರುಗಳು ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ ಆಸೀನರಾಗತಕ್ಕದ್ದು. ಮತಗಟ್ಟೆಯಲ್ಲಿ ಜನಪ್ರತಿನಿಧಿ ಕಾಯ್ದೆ ಕಲಂ 128 ರಲ್ಲಿ ನಿರ್ದಿಷ್ಟಪಡಿಸಿದಂತೆ ಮತದಾನದ ಗೌಪ್ಯತೆಯನ್ನು ಕಾಪಾಡತಕ್ಕದ್ದು ಎಂದು ತಿಳಿಸಿದರು.

ಮೀಡಿಯಾ ಸರ್ಟಿಫಿಕೇಷನ್ ಮತ್ತು ಮಾನಿಟರಿಂಗ್ ಸೆಲ್ ಮತದಾನಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸಬೇಕಾದರೆ ಸಂಬಂಧ ಪಟ್ಟ ಅಭ್ಯರ್ಥಿಗಳು ಅಥವಾ ಪಕ್ಷವು ಮಾಧ್ಯಮ ಪ್ರಮಾನಣೀಕರಣ ಸಮಿತಿ ವತಿಯಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಚುನಾವಣೋತ್ತರ ಸಮೀಕ್ಷೆ ಹಾಗೂ ಸಮೀಕ್ಷೆ ಫಲಿತಾಂಶವನ್ನು ಪ್ರಚಾರಪಡಿಸಲು ಅವಕಾಶವಿರುವುದಿಲ್ಲ.

ಅಭ್ಯರ್ಥಿ ಪರವಾಗಿ ಯಾವುದೇ ವ್ಯಕ್ತಿ ಅಥವಾ ಪಕ್ಷ ಚುನಾವಣಾ ಸಂಬಂಧ ಯಾವುದೇ ರೀತಿಯ ಪ್ರಚಾರ/ಭಿತ್ತಿಪತ್ರ/ ಜಾಹಿರಾತುಗಳನ್ನು ಸಂಬಂಧಪಟ್ಟ ಮಾಧ್ಯಮ ಪ್ರಮಾಣೀಕರಣ ಸಮಿತಿಯ ಗಮನಕ್ಕೆಬಾರದಂತೆ ಪ್ರಚಾರ ಮಾಡಿದಲ್ಲಿ ಉಲ್ಲಂಘನೆ ಕ್ರಮವೆಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ ಪ್ರಕರಣ 171ಹೆಚ್ ರಂತೆ ಮುದ್ರಣಗೊಳಿಸಿದ ಮುದ್ರಕರ ಮತ್ತು ಪ್ರಕಾಶಕರ ವಿರುದ್ಧ ದಂಡನಾರ್ಹ ಕ್ರಮವಹಿಸಲಾಗುವುದು.

ಅಭ್ಯರ್ಥಿಯ ಪರವಾಗಿ ಮುದ್ರಿಸಲಾದ ಕರಪತ್ರ, ಭಿತ್ತಿಪತ್ರ, ಪೋಸ್ಟರ್ ಮತ್ತು ಇತರೆ ದಾಖಲಾತಿಗಳಲ್ಲಿ ಮುದ್ರಕರ ಹೆಸರು ಮತ್ತು ವಿಳಾಸವನ್ನು ಕಡ್ಡಾಯವಾಗಿ ಮುದ್ರಿಸುವುದು. ಪ್ರಕಾಶಕರು ಹಾಗೂ ಮುದ್ರಾಕರ ಹೆಸರುಗಳನ್ನೂ ನಮೂದಿಸದಿದ್ದಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕರಣ 127ಎ ರಂತೆ ಕ್ರಮವಹಿಸಲಾಗುವುದು ಎಂದರು.

ಅಭ್ಯರ್ಥಿಯು ಪ್ರಚಾರ ಸಾಮಗ್ರಿಗಳ ಮತ್ತು ಪ್ರತಿದಿನದ ವೆಚ್ಚದ ವಿವರಗಳನ್ನು ನಿಗಧಿತ ಅನುಬಂಧ 12ರಲ್ಲಿ ಸೂಚಿಸಿರುವಂತೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತೆರೆಯಲಾಗಿರುವ ಚುನಾವಣಾ ವೆಚ್ಚ ವೀಕ್ಷಕರ ಕಛೇರಿಗೆ ಸಲ್ಲಿಸತಕ್ಕದ್ದು ಎಂದು ತಿಳಿಸಿದರು.

ಪೂರ್ವ ಪ್ರಮಾಣೀಕರಣ ಅನುಮತಿ
ಚುನಾವಣಾ ಆಯೋಗದ ನಿರ್ದೇಶನದಂತೆ ಮುದ್ರಣ ಮಾಧ್ಯಮದಲ್ಲಿ ಯಾವುದೇ ಪ್ರಚೋದಕ, ತಪ್ಪು ದಾರಿಗೆಳೆಯುವ ಅಥವಾ ದ್ವೇಷದ ಜಾಹೀರಾತುಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಚಿತಪಡಿಸಿಕೊಳ್ಳಲು, ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಯಾವುದೇ ಇತರ ಸಂಸ್ಥೆಗಳು ಅಥವಾ ವ್ಯಕ್ತಿಗಳು ರಾಜಕೀಯ ಜಾಹೀರಾತುಗಳನ್ನು ಮತದಾನದ ದಿನ ಹಾಗೂ ಮತದಾನದ ಮುನ್ನ ದಿನದಂದ (ಏಪ್ರಿಲ್ 25 ಹಾಗೂ ಏಪ್ರಿಲ್ 26) ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವ-ಪ್ರಮಾಣೀಕರಣ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.

ವಿಕಲಚೇತನರು ಹಾಗೂ ಹಿರಿಯ ನಾಗರಿಕ ಮತದಾರರಿಗೆ ಅನುಕೂಲಕರ ವ್ಯವಸ್ಥೆ
20 – ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ ವಿಕಲಚೇತನ ಹಾಗೂ ಹಿರಿಯ ನಾಗರೀಕ ಮತದಾರರಿಗೆ ಸುಗಮವಾಗಿ ಮತದಾನ ಮಾಡಲು ಪ್ರತಿ ಮತಗಟ್ಟೆಗೆ ಇಳಿಜಾರು ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ ಮಾಡಲಾಗಿರುತ್ತದೆ. ದೃಷ್ಟಿ ದೋಷವುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಅವಶ್ಯಕ ವಾಗುವಂತೆ ಬ್ರೈಲ್ ಲಿಪಿಯುಳ್ಳ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆ ಹಾಗೂ ಡಮ್ಮಿ ಬ್ರೈನ್ ಬ್ಯಾಲೆಟ್ ಪೇಪರ್ ವ್ಯವಸ್ಥೆ, ಶ್ರವಣದೋಷವುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಅವಶ್ಯಕವಿದ್ದಲ್ಲಿ ಸಂಜ್ಞಾ ಭಾಷೆ ತಜ್ಞರಿಂದ ಸಂಜ್ಞಾ ಭಾಷೆ (Signed Language) ಮೂಲಕ ಅವಶ್ಯಕ ಕಲ್ಪಿಸಲಾಗಿದೆ. ಮಂದದೃಷ್ಟಿಯುಳ್ಳ ವಿಕಲಚೇತನರಿಗೆ ಮತದಾನ ಮಾಡಲು ಮತಗಟ್ಟೆ ಕೇಂದ್ರಗಳಲ್ಲಿ ಬೂತಕನ್ನಡಿ ವ್ಯವಸ್ಥೆ ಹಾಗೂ ವಿಕಲಚೇತನರು, ಅಶಕ್ತರಿಗೆ ಮತ್ತು ಹಿರಿಯ ನಾಗರಿಕರಿಗೆ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

20 – ಮಂಡ್ಯ ಲೋಕಸಭಾ ವ್ಯಾಪ್ತಿಯ ಮತದಾರರಾಗಿದ್ದು, ಬೇರೆ ಜಿಲ್ಲೆ/ ಬೇರೆ ಕಡೆ ಕರ್ತವ್ಯ ನಿರ್ವಹಿಸುವಂತಹ ಅಧಿಕಾರಿ/ ನೌಕರರಿಗೆ ಅಂಚೆ ಮತ ಪತ್ರದ ವ್ಯವಸ್ಥೆಯನ್ನು ಚುನಾವಣಾ ಆಯೋಗವು ಕಲ್ಪಿಸಿರುತ್ತದೆ ಎಂದರು.

ಮತದಾನ ದಿವಸದಂದು ವೇತನ ಸಹಿತ ರಜೆ:
ಏಪ್ರಿಲ್ 26 ರಂದು ಮತದಾನ ನಡೆಯಲಿದ್ದು, ಮತದಾನ ದಿನದಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕಾ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ – 1951 ರ ಕಲಂ 135 (ಬಿ ) ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲಾಗುವುದು ಎಂದರು.

ಮಾದರಿ ನೀತಿ ಜಾರಿಯಾದ ಮಾರ್ಚ್ 16 ರಿಂದ ಏಪ್ರಿಲ್ 23 ರವರೆಗೆ ರೂ. 1,06,08,990/- ನಗದು, ರೂ.1,50,27,871.39/- ಮೌಲ್ಯದ ಮದ್ಯ, ರೂ. 2,17,040 ಮೌಲ್ಯದ ಡ್ರಗ್ಸ್ ಹಾಗೂ ರೂ. 40,000 ಮೌಲ್ಯದ 2000 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಪ್ರಜಾಪ್ರಭುತ್ವದ ಮತದಾನ ಹಬ್ಬಕ್ಕೆ ಆಮಂತ್ರಣ
ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಏಪ್ರಿಲ್ 26 ರಂದು ಪ್ರತಿ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಪ್ರಜಾಪ್ರಭುತ್ವದ ಮತದಾನ ಹಬ್ಬಕ್ಕೆ ಆಮಂತ್ರಣ ಎಂಬ ಆಹ್ವಾನ ಪ್ರತಿಗಳನ್ನು ಮುದ್ರಿಸಿ ಪ್ರತಿ ಕುಟುಂಬಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1822 ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಲು 2099 ಪಿಆರ್ ಒ ಗಳು, 2099 ಎ ಪಿ ಆರ್ ಒ ಗಳು, 4198 ಪಿಒಗಳು, ಒಟ್ಟು 8396 ಸಿಬ್ಬಂದಿಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದು.

ಶುಷ್ಕ ದಿನ ಘೋಷಣೆ
ಚುನಾವಣೆಯ ಮತದಾನವು ಏಪ್ರಿಲ್ 26 ರಂದು ಹಾಗೂ ಮತ ಎಣಿಕೆಯ ಕಾರ್ಯವು ಜೂನ್ 4 ರಂದು ನಡೆಯಲಿದೆ. ಮತದಾನದ ಸಮಯದಲ್ಲಿ ಹಾಗೂ ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತದಾನದ ದಿನದಂದು ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮತದಾನ ಮತ್ತು ಮತ ಎಣಿಕೆ ದಿನದಂದು ಶುಷ್ಕ ದಿನವೆಂದು ಘೋಷಿಸಲಾಗಿದ್ದು, ಮಂಡ್ಯ ಜಿಲ್ಲೆಯಾದ್ಯಂತ ಏಪ್ರಿಲ್ 24 ರ ಸಂಜೆ 6 ಗಂಟೆಯಿಂದ ಏಪ್ರಿಲ್ 27 ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಮಂಡ್ಯ ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದಲ್ಲಿ ಜೂನ್ 4 ರಂದು ಮತ ಎಣಿಕೆ ಕಾರ್ಯವು ನಡೆಯುವ ಹಿನ್ನೆಲೆ ಮಂಡ್ಯ ನಗರ ವ್ಯಾಪ್ತಿ ಹಾಗೂ ನಗರದ ವ್ಯಾಪ್ತಿಯಿಂದ 5 ಕಿ. ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಜೂನ್ 3 ರಂದು ಸಂಜೆ 6 ಗಂಟೆಯಿಂದ ಜೂನ್ 5 ರ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್/ ಕ್ಲಬ್‌ಗಳನ್ನು ಮುಚ್ಚುವಂತೆ ಹಾಗೂ ಸದರಿ ಅವಧಿಯಲ್ಲಿ ಮದ್ಯ ತಯಾರಿಕ ಘಟಕಗಳು, ಮದ್ಯ ಮಾರಾಟ, ಹಂಚಿಕೆ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಶುಷ್ಕ ದಿನಗಳೆಂದು ಆದೇಶ ಹೊರಡಿಸಲಾಗಿದೆ ಎಂದರು.

ಸಂತೆ ಜಾತ್ರೆ ನಿಷೇಧ
ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಮತದಾನಕ್ಕೆ ಅವಕಾಶ ಕಲ್ಪಿಸುವ ಹಾಗೂ ಮತದಾನ ಕಾರ್ಯವನ್ನು ಸುಗಮವಾಗಿ ನಡೆಸುವ ಸಲುವಾಗಿ ಏಪ್ರಿಲ್ 26 ರಂದು ಮಂಡ್ಯ ಜಿಲ್ಲೆಯಾದ್ಯಂತ ನಡೆಯುವ ಎಲ್ಲಾ ರೀತಿಯ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ನಿಷೇಧಿಸಲಾಗಿದೆ ಎಂದರು.

ಮತದಾನ ಸಿಬ್ಬಂದಿಗಳಿಗೆ ಊಟೋಪಚಾರದ ವ್ಯವಸ್ಥೆ
ಜಿಲ್ಲೆಯ 1874 ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮತದಾನ ಸಿಬ್ಬಂದಿಗಳಿಗೆ ಏಪ್ರಿಲ್ 25 ರ ರಾತ್ರಿ ಮತ್ತು ಏಪ್ರಿಲ್ 26ರ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಎಸ್ ನಿರ್ಮಲಾ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Trending

error: Content is protected !!