Mandya
ಕಾಂಗ್ರೆಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಯತ್ನ: ಬಂಧನ
ಮಂಡ್ಯ: ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಗರದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬುಧವಾರ ಬಂಧಿಸಿದರು.
ನಗರದ ಜಿಲ್ಲಾ ಬಿಜೆಪಿ ವಿಕಾಸ ಭವನದ ಬಳಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸೇರಿದಂತೆ ಇತರರ ವಿರುದ್ಧ ಘೋಷಣೆ ಕೂಗಿದರು. ನಂತರ ವಿನೋಬ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದ್ದನ್ನು ಸ್ಥಳದಲ್ಲಿದ್ದ ಪೊಲೀಸರು ಬಂಧಿಸುವ ಮೂಲಕ ವಿಫಲಗೊಳಿಸಿದರು.
ಪ್ರತಿಭಟನೆ ಹಿನ್ನಲೆಯಲ್ಲಿ ಕಾಂಗ್ರೆಸ್ ಕಚೇರಿ ಬಳಿ ಪೊಲೀಸರು ಬ್ಯಾರಿಕೇಟ್ ಅಳವಡಿಸಿ, ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸರ ಮೂಲಕ ತಡೆಯುವ ಯತ್ನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಬ್ಯಾರಿಕೇಡ್ ಮೇಲೇರಿದ ಕೆಲವು ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೆಡ್ ತಡೆ ಭೇದಿಸಲು ಪ್ರಯತ್ನ ಮಾಡಿದಾರಾದರೂ ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಡದೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು.
ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ ವಿಜೇತ ನಾಸೀರ್ ಹುಸೇನ್ ಬೆಂಬಲಿಗ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ದೇಶದ್ರೋಹಿ ಕೃತ್ಯ ಎಸಗಿದ್ದಾನೆ, ಇಂತಹ ದೇಶದ್ರೋಹಿ ಕೃತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡು, ದೇಶದ್ರೋಹಿಯನ್ನು ಸ್ಥಳದಲ್ಲಿಯೇ ಬಂಧಿಸದೆ ಹಾಗೆಯೇ ಬಿಟ್ಟಿದ್ದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರವು ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ, ಕಾಂಗ್ರೆಸ್ ನಾಯಕರು ದುಡ್ಡಿಗಾಗಿ ಅಯೋಗ್ಯರನ್ನು ರಾಜ್ಯಸಭೆ ಪ್ರವೇಶಿಸುವಂತೆ ಮಾಡಿದ್ದಾರೆ. ಗೌರವವಿಲ್ಲದಂತೆ ವರ್ತಿಸಿರುವ ನಾಸೀರ್ ಹುಸೇನ್ ದುರಹಂಕಾರದ ಮಾತುಗಳನ್ನಾಡಿರುವುದು ಎಲ್ಲರ ಮನಸ್ಸಿಗೆ ಘಾಸಿ ಉಂಟುಮಾಡಿದೆ. ದೇಶದ್ರೋಹಿಗಳ ಪಡೆಯನ್ನು ಹೊಂದಿರುವ ಇಂತಹವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ದೇಶದ ಗಡಿಯಲ್ಲಿ ಭಾರತೀಯ ಯೋಧರು ದೇಶ ರಕ್ಷಣೆಯಲ್ಲಿ ನಿರತರಾಗಿದ್ದಾರೆ, ಪ್ರಾಣದ ಹಂಗು ತೊರೆದು ಭಾರತೀಯರ ರಕ್ಷಣೆ ಮಾಡುತ್ತಿದ್ದಾರೆ. ಆದರೆ ಶತ್ರು ರಾಷ್ಟ್ರ ಪಾಕಿಸ್ತಾನ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದರೆ ಭಾರತೀಯ ಯೋಧರಿಗೆ ಅವಮಾನ ಮಾಡಿದಂತೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆಗ ದೇಶ ದ್ರೋಹಿಗಳಿಗೆ ಮತ್ತು ಪಾಕಿಸ್ತಾನ ಸಮರ್ಥಕರಿಗೆ ಬಲ ಬಂದಂತೆ ಆಗುತ್ತಿದೆ. ವಿಧಾನಸೌಧದಲ್ಲಿ ಕೇಳಿಬಂದಿರುವ ಪಾಕಿಸ್ತಾನ ಜಿಂದಾಬಾದ್ ಜೈಕಾರಕ್ಕೆ ಕಾಂಗ್ರೆಸ್ ಈವರೆಗೆ ರಾಜಕಾಣರದ ತುಷ್ಟಿಕರಣ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಸಮರ್ಥನೆಗೆ ಮುಂದಾಗಿರುವ ಕಾಂಗ್ರೆಸ್ ಪಕ್ಷದ ನಡೆ ದೇಶದ್ರೋಹಿ ಪಕ್ಷವಾಗಿದೆ, ದೇಶದ್ರೋಹ ಮಾಡಿರುವ ಆರೋಪಿಯ ಪರ ವಕಾಲತ್ತು ಬಯಸುವುದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೇಶಭಕ್ತಿ, ಭಾರತ ಮಾತೆ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ದೇಶದ್ರೋಹಿಯನ್ನು ಬಂಧಿಸಲಿ, ರಾಜ್ಯ ಪೊಲೀಸ್ ಇಲಾಖೆ, ಗೃಹ ಸಚಿವರು ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಎಚ್.ಆರ್. ಅರವಿಂದ್, ಸಿ.ಟಿ.ಮಂಜುನಾಥ್, ವಸಂತ್, ಭೀಮೇಶ್, ಅಶೋಕ್‌ಕುಮಾರ್, ಕೇಶವ, ನಾಗಮಂಗಲ ನರಸಿಂಹ, ಹೊಸಹಳ್ಳಿ ಶಿವು, ನಿತ್ಯಾನಂದ, ಶಂಕರ್, ಧರಣಿ, ನರಸಿಂಹಚಾರ್, ಶಶಿಕುಮಾರ್, ಹೊಸಳ್ಳಿ ಶಿವು, ಅಶೋಕ್ ಜಯರಾಂ ಶ್ವೇತಾ ಅಶೋಕ್, ಮಮತಾ, ಚಂದನ್, ತಾಯಮ್ಮ, ಪುಟ್ಟಮ್ಮ, ವರಲಕ್ಷ್ಮಿ ಭಾಗವಹಿಸಿದ್ದರು.
ಬಿಜೆಪಿ ಕಾರ್ಯಕರ್ತರ ಬಂಧನ ನಂತರ ಬಿಡುಗಡೆ
ಮಂಡ್ಯ: ಪಾಕಿಸ್ತಾನ ಜಿಂದಾಬಾದ್ ಘೊಷಣೆ ಕೂಗಿದ್ದನ್ನ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಎಚ್.ಆರ್. ಅರವಿಂದ್, ಸಿ.ಟಿ.ಮಂಜುನಾಥ್ ಸೇರಿದಂತೆ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬುಧವಾರ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯ ಸುತ್ತ ಪೊಲೀಸ್ ಸರ್ಪಕಾವಲಿತ್ತು, ಜೊತೆಗೆ ಬ್ಯಾರಿಕೇಡ್‌ಗಳನ್ನು ಇಟ್ಟುಕೊಂಡು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಬ್ಯಾರಿಕೇಡ್‌ಗಳನ್ನು ಲೆಕ್ಕಿಸದೇ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್ ಎಂಬ ಘೋಷಣೆ ಕೂಗುತ್ತಾ ಬ್ಯಾರಿಕೇಡ್‌ಗಳನ್ನೇ ದಾಟಲು ಮೇಲೆ ಹತ್ತಲು ಮುಂದಾದರು ಇದನ್ನು ತಡೆದ ಪೊಲೀಸರು ಬಂಧಿಸಿ ಪೊಲೀಸ್ ವಾಹನದಲ್ಲಿ ತುಂಬಿಕೊಂಡು ಹೋದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೇಶ ದ್ರೋಹಿಗಳ ಸಂಖ್ಯೆ ಹೆಚ್ಚುತ್ತದೆ, ಇದಕ್ಕೆ ಕಡಿವಾಣ ಹಾಕದೇ ಅವರನ್ನೇ ಸಮರ್ಥಿಸಿಕೊಳ್ಳುವ ಇಂತಹ ದುರಾಡಳಿತದ ಕಾಂಗ್ರೆಸ್ ಸರ್ಕಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಸಾಮಾನ್ಯ ಸಂಗತಿಯಲ್ಲ. ದೇಶ ದ್ರೋಹಕ್ಕೆ ಕುಮ್ಮಕ್ಕು ನೀಡುವ ಕೃತ್ಯ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಕವಾಯತು ಮೈದಾನದಲ್ಲಿ ಕರೆದುಕೊಂಡು ಹೋದ ನಂತರ, ಅವರಿಂದ ಸಹಿ ಹಾಕಿಸಿಕೊಂಡು ಸುಮಾರು ಎರಡು ತಾಸುಗಳ ನಂತರ ಬಿಡುಗಡೆ ಮಾಡಲಾಯಿತು.
Education
ಅತಿಥಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿ ವಸತಿ ಕಲ್ಪಿಸೋಣ- ಶಾಸಕ ಪಿ ರವಿಕುಮಾರ್
ಮಂಡ್ಯ: ಮುಂಬರುವ ಡಿಸೆಂಬರ್ ೨೦,೨೧, ಮತ್ತು ೨೨ ರಂದು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳನ್ನು ಅತಿ ಗಣ್ಯರು, ಗಣ್ಯರು, ಆಹ್ವಾನಿತರು, ನೋಂದಾಯಿತ ಸದಸ್ಯರು ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ವಸತಿ ಸೌಲಭ್ಯ ಕಲ್ಪಿಸೋಣ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ವಸತಿ ಸಮಿತಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಸೆ.೧೫ ರೊಳಗೆ ಸಮ್ಮೇಳನದ ನೋಂದಣಿ ಸಮಿತಿಯೊಂದಿಗೆ ಸಭೆ ನಡೆಸಿ ವಸತಿ ಕಲ್ಪಿಸ ಬಹುದಾದ ಹೋಟೆಲ್‌ಗಳು, ಸಮುದಾಯ ಭವನಗಳು, ಹಾಸ್ಟೆಲ್‌ಗಳು, ರೆಸಾರ್ಟ್ ಪಟ್ಟಿ ತಯಾರಿಸಲಾಗುವುದು. ಈ ಕೆಲಸಕ್ಕಾಗಿ ಪಿಡಿಒ,ಇಓಗಳು ಮತ್ತು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರನ್ನು ಬಳಸಿಕೊಳ್ಳಲಾಗುವುದು ಎಂದರು.
ಸಮ್ಮೇಳನಕ್ಕೆ ಬಂದವರನ್ನು ‘ಮನೆ ಅತಿಥಿ’ ಯಾಗಿ ಉಳಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಲಾಗುವುದು. ಸಾಮಾಜಿಕ ಜಾಲತಾಣಗಳು ಮತ್ತು ನಗರದಲ್ಲಿ ರ‍್ಯಾಲಿಗಳನ್ನು ನಡೆಸುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಬೇಕು.ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್ ಮುಂತಾದ ಕಡೆ ಸಮ್ಮೇಳನದ ಲೋಗೋವನ್ನು ಒಳಗೊಂಡ ಫ್ಲೆಕ್ಸ್ಗಳನ್ನು ಶೀಘ್ರವೇ ಅಳವಡಿಸಲಾಗುವುದು. ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಸೂಚಿಸಲಾಗುವುದು ಎಂದರು.
ಶಿಕ್ಷಣ, ಕಂದಾಯ ಇಲಾಖೆ ಮತ್ತು ಉಪ ಸಮಿತಿಯ ಸದಸ್ಯರನ್ನು ಬಳಸಿಕೊಂಡು ಸಾಧಕ ಬಾಧಕಗಳನ್ನು ನೋಡಿಕೊಂಡು ವಸತಿ ಪ್ರದೇಶಗಳನ್ನು ನಿರ್ಧರಿಸಲಾಗುವುದು. ಅದಕ್ಕೂ ಮುನ್ನ ಹೋಟೆಲ್ ಮಾಲೀಕರ, ಸಮುದಾಯ ಭವನಗಳ ಮಾಲೀಕರ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಸಭೆಯ ಆರಂಭಕ್ಕೂ ಮುನ್ನ ಉಪವಿಭಾಗಾಧಿಕಾರಿ ಶಿವಮೂರ್ತಿ ವಸತಿ ಸಮಿತಿಯ ರೂಪುರೇಷೆಗಳನ್ನು ನೀಡಿ, ಡಿಸೆಂಬರ್ ೧೦ ರೊಳಗೆ ನೋಂದಾಯಿಸಿಕೊಂಡ ಸದಸ್ಯರಿಗೆ ಮಾತ್ರ ವಸತಿ ಕಲ್ಪಿಸಬಹುದು. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮೈಸೂರು ಮುಂತಾದ ಕಡೆಗಳಲ್ಲಿ ಇರುವ ಹೋಟೆಲ್, ಸಮುದಾಯ ಭವನ, ಹಾಸ್ಟೆಲ್‌ಗಳು, ರೆಸಾರ್ಟ್ ಗಳನ್ನು ಗುರುತಿಸಲಾಗುವುದು. ಸಮ್ಮೇಳನಕ್ಕ್ಕೆ ನೋಂದಣಿ ಮಾಡಿಸಿಕೊಂಡ ಸದಸ್ಯರಿಗೆ ವಸತಿ ವ್ಯವಸ್ಥೆ ನೀಡಲು ಆದ್ಯತೆ ನೀಡಲಾಗುವುದು. ಮೂರು ದಿನ ಮುಂಚೆ ವಸತಿಗೆ ನಿಗದಿಪಡಿಸಿದ ಕಟ್ಟಡಗಳನ್ನು ಸಮಿತಿಯ ವಶಕ್ಕೆ ಪಡೆಯಬೇಕು ಎಂದರು.
ಸಮ್ಮೇಳನ ಸಮನ್ವಯ ಸಮಿತಿ ಸಂಚಾಲಕರಾದ ಮೀರಾ ಶಿವಲಿಂಗಯ್ಯ ಮಾತನಾಡಿ ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ೧೦,೦೦೦ ಜನಕ್ಕೆ ವಸತಿ ಕಲ್ಪಿಸಲಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು.ಕಲಾತಂಡಗಳನ್ನು ಸಮುದಾಯ ಭವನಗಳಲ್ಲಿ ಉಳಿಯಲು ಅವಕಾಶ ಮಾಡಿಕೊಡಬಹುದು ಎಂದರು.
ಸಮಿತಿಯ ಸದಸ್ಯ ಟಿ.ಎಸ್.ಸತ್ಯಾನಂದ ಮಾತನಾಡಿ, ಅತಿ ಮುಖ್ಯ ಗಣ್ಯರಿಗೆ ಅಮರಾವತಿ ಹೋಟೆಲ್‌ನಲ್ಲಿ ವಸತಿ ಕಲ್ಪಿಸಿ ಉಳಿದವರಿಗೆ ಮೈಸೂರಿನಲ್ಲಿ ಮಾಡಬೇಕಾಗುತ್ತದೆ. ವಸತಿ ವ್ಯವಸ್ಥೆ ಕಲ್ಪಿಸುವ ಕಟ್ಟಡಗಳಿಗೆ ಖ್ಯಾತ ಕವಿಗಳ ಹೆಸರುಗಳನ್ನು ಇಡಬೇಕು. ಪತ್ರಿಕಾ ಪ್ರಕಟಣೆ ನೀಡಿ ಆಸಕ್ತಿಯುಳ್ಳ ಜನರು ‘ಮನೆ ಅತಿಥಿ’ಯಾಗಿ ವಾಸ್ತವ್ಯ ನೀಡಲು ಬಯಸುವವರ ಪಟ್ಟಿ ಮಾಡಬಹುದು. ಇನ್ಫೋಸಿಸ್ ಸಂಸ್ಥೆಯಲ್ಲಿ ೧೦೦೦ ಜನಕ್ಕೆ ವಸತಿ ಕಲ್ಪಿಸಬಹುದು ಎಂಬ ಸಲಹೆ ನೀಡಿದರು.
ಸಮಿತಿ ಸದಸ್ಯ ಅಪೂರ್ವಚಂದು ಈ ಹಿಂದೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿತ ವಾದ ವಿಷಯಗಳನ್ನು ಸಭೆಯ ಮುಂದಿಟ್ಟರು. ನೋಡಲ್ ಅಧಿಕಾರಿಗಳು ಮತ್ತು ಮಾಹಿತಿ ಕೇಂದ್ರಗಳನ್ನು ಸಮ್ಮೇಳನಕ್ಕೆ ಬರುವವರಿಗೆ ಮಾರ್ಗದರ್ಶನ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಂ, ತಹಸಿಲ್ದಾರ್ ಶಿವಕುಮಾರ್ ಬಿರಾದಾರ, ಬೇಲೂರು ಸೋಮಶೇಖರ್, ಕುರುಬರ ಸಂಘದ ಅಧ್ಯಕ್ಷ ಸುರೇಶ್, ಎಚ್.ಕೆ. ರುದ್ರಪ್ಪ,ಸತ್ಯಪ್ಪ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ ಪಣ್ಣೆದೊಡ್ಡಿ, ಬಿ.ಎಂ.ಅಪ್ಪಾಜಪ್ಪ, ಹೊಳಲು ಶ್ರೀಧರ್, ಧನಂಜಯ ದರಸಗುಪ್ಪೆ, ಎಲ್.ಕೃಷ್ಣ, ಸುನಿಲ್ ಕುಮಾರ್, ಹನುಮಂತಯ್ಯ,ದೇವರಾಜು ಕೊಪ್ಪ ಮುಂತಾದವರು ಉಪಸ್ಥಿತರಿದ್ದರು.
Mandya
ಸಚಿವ ಎಂಬಿ ಪಾಟೀಲ್ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಆಗ್ರಹ
ಮಂಡ್ಯ : ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಎಂ.ಬಿ.ಪಾಟೀಲ್ ಅವರು ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚ ರಾಜ್ಯ ಕಾರ್ಯದರ್ಶಿ ಎಂ.ಎಸ್ ಪರಮಾನಂದ ಆಗ್ರಹಿಸಿದ್ದಾರೆ.
ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ನಿರ್ಭೀತಿಯಿಂದ ನೇರಾನೇರ ಪ್ರಶ್ನಿಸುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಎಂಬಿ ಪಾಟೀಲ್ ಅವರು ಅಪಮಾನಕರವಾಗಿ ನಿಂದನೆ ಮಾಡುತ್ತಿರುವುದು ಖಂಡನೀಯ ಎಂದರು.
ಈ ಹಿಂದೆ ಕೆಐಎಡಿಬಿ ವತಿಯಿಂದ ಸೈಟನ್ನು ಅಲಾಟ್ ಮಾಡಲಾಗಿದೆ. ಸಿಎ ಸೈಟ್ ಪಡೆಯಲು 283 ಅರ್ಜಿ ಹೋಗಿದ್ದು , ಆದರೆ ತರಾತುರಿಯಲ್ಲಿ ಒಂದು ತಿಂಗಳೊಳಗೆ 193 ಸೈಟುಗಳನ್ನು ವಿತರಿಸಲಾಗಿದೆ ಎಂದು ದೂರಿದರು.
ಈ ಬಗ್ಗೆ ನಾರಾಯಣಸ್ವಾಮಿ ಅವರು ತನಿಖೆಗೆ ಒತ್ತಾಯಿಸಿದ್ದಾರೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಅವಮಾನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ದಲಿತ, ವಂಚಿತ ಮತ್ತು ಪೀಡಿತ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಬದಲು ದಲಿತರ ಹೆಸರಿನಲ್ಲಿ ಸರ್ವವನ್ನು ಬಾಚಿಕೊಂಡು ತಮ್ಮ ಕುಟುಂಬ ಭದ್ರ ಪಡಿಸಿಕೊಳ್ಳುವ ಖರ್ಗೆ ಕುಟುಂಬಕ್ಕೂ ನ್ಯೂನ್ಯತೆಗಳನ್ನು ಎತ್ತಿ ಹಿಡಿದು ತಳ ಸಮುದಾಯಗಳಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವ ಚಲವಾದಿ ನಾರಾಯಣಸ್ವಾಮಿ ಅವರಿಗೂ ಯಾವ ಹೋಲಿಕೆ ಇದೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ವಿರುದ್ಧ ಸೊಲ್ಲೆತ್ತಿದರೆ ಭ್ರಷ್ಟರೆಲ್ಲ ಸೇರಿ ನಾರಾಯಣಸ್ವಾಮಿ ಅವರನ್ನು ಕೀಳು ಮಟ್ಟದ ಭಾಷೆ ಬಳಸಿ ನಿಂದಿಸುತ್ತಿದ್ದಾರೆ. ತಪ್ಪೇ ಮಾಡದೆ ನ್ಯಾಯದ ಪರವಾಗಿರುವ ಅವರನ್ನು ಅಪಮಾನಿಸಿ ತೇಜೊವಧೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಸಚಿವ ಎಂ ಬಿ ಪಾಟೀಲ್ ಅವರು ನಾರಾಯಣಸ್ವಾಮಿ ಅವರನ್ನು ಶೆಡ್ ಗಿರಾಕಿ ಎಂದು ಟೀಕಿಸಿದ್ದಾರೆ. ಆದರೆ ಎಂಬಿ ಪಾಟೀಲ್ ಅವರೇ ಲೊಡ್ದು ಗಿರಾಕಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೂಡಲೇ ಸಚಿವ ಎಂಬಿ ಪಾಟೀಲ್ ಅವರು ನಾರಾಯಣಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಜಿ.ಶಂಕರ್, ಜಿಲ್ಲಾ ವಕ್ತಾರ ಸಿಟಿ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಎಸ್ ಧರಣಿಂದ್ರ, ಕೆಆರ್ ನಿತ್ಯಾನಂದ ,ಜಿಡಿ ಯೋಗೇಶ್ ಸೇರಿದಂತೆ ಇತರರು ಇದ್ದರು.
Mandya
ಸೆಪ್ಟೆಂಬರ್ 15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ರಾಜ್ಯದಲ್ಲಿ ಪ್ರಪ್ರಥಮವಾಗಿ ಆಚರಣೆ: ಡಾ.ಕುಮಾರ
ಮಂಡ್ಯ ; ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆ.15 ರಂದು ಆಚರಿಸಲಾಗುತ್ತಿದೆ. ಮಾನವ ಸರಪಳಿ ರಚಿಸುವ ಮೂಲಕ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆಯ ಅಂಗವಾಗಿ ರಾಜ್ಯದಲ್ಲೇ ಅತೀ ಉದ್ದವಾದ ಮಾನವ ಸರಪಳಿಯ ಮೂಲಕ ಪ್ರಜಾಪ್ರಭುತ್ವದ ಅರಿವನ್ನು ಮೂಡಿಸಲಾಗುವುದು. ಮಾನವ ಸರಪಳಿಯು ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೂ ರಚಿಸಿ ಏಕಕಾಲದಲ್ಲಿ ಜಾಗೃತಿ ಮೂಡಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಮದ್ದೂರಿನ ನಿಡಘಟ್ಟ ಗ್ರಾಮದಿಂದ ಶ್ರೀರಂಗಪಟ್ಟಣದ ಸಿದ್ದಲಿಂಗಪುರದವರೆಗೆ ಸುಮಾರು 62 ಕಿ. ಮೀ. ವರೆಗೂ ಮಾನವನ ಸರಪಳಿಯ ನಿರ್ಮಾಣ ಮಾಡಬೇಕು. ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು, ಅಧ್ಯಕ್ಷರು, ಸದಸ್ಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.
2007 ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವವಿರುವ ಎಲ್ಲಾ ರಾಷ್ಟ್ರಗಳು ಸೇರಿ ವಿಶೇಷವಾಗಿ ಭಾರತ ದೇಶವು ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ ಎಂದು ಎಲ್ಲಾ ದೇಶಗಳು ಸಹಿ ಮಾಡಿ ಅನುಮೋದಿಸಲ್ಪಟ್ಟಿತು. ಆದ್ದರಿಂದ ಪ್ರತಿ ವರ್ಷ ಪ್ರಜಾಪ್ರಭುತ್ವ ಹೊಂದಿರುವ ದೇಶಗಳು ಅಂತರರಾಷ್ಟೀಯ ಪ್ರಜಾಪ್ರಭುತ್ವ ದಿನವನ್ನು ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಕೂಡ ತಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳುವ ಹಾಗೂ ಪಾಲಿಸುವ ಮೂಲಕ ದೇಶದ ಘನತೆಯನ್ನು ಎತ್ತಿ ಹಿಡಿಯುವುದು ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ಮಾನವ ಸರಪಳಿ ನಿರ್ಮಿಸುವ ಸಂಬಂಧ ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ತಾಲ್ಲೂಕುಗಳ ಮಾರ್ಗವಾಗಿ ಮಾನವ ಸರಪಳಿ ನಿರ್ಮಾಣವಾಗುವುದರಿಂದ ಮದ್ದೂರಿನಲ್ಲಿ 5 ವಿಭಾಗಗಳು, ಮಂಡ್ಯದಲ್ಲಿ ಒಟ್ಟು 7 ವಿಭಾಗಗಳು ಹಾಗೂ ಶ್ರೀರಂಗಪಟ್ಟಣದಲ್ಲಿ 5 ವಿಭಾಗಗಳನ್ನಾಗಿ ಮಾಡಿಕೊಳ್ಳಲಾಗಿದ್ದು, ಪ್ರತಿ ವಿಭಾಗಕ್ಕೂ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಒಟ್ಟು 62 ಕಿ ಮೀ. ಅನ್ನು ಸರ್ವೇ ಮಾಡಿ ಪ್ರತಿ ಕಿ. ಮೀ. ಗೂ ಒಂದು ಲ್ಯಾಂಡ್ ಮಾರ್ಕ್ ಹಾಕಿ ಗುರುತು ಮಾಡಿ ಅದನ್ನು ವಲಯಗಳನ್ನಾಗಿ ಮಾಡಿಕೊಳ್ಳಿ. ಪ್ರತಿ ವಲಯಕ್ಕೂ ಆಯಾ ತಾಲ್ಲೂಕಿನ ತಾಲ್ಲೂಕು ಅಧಿಕಾರಿಗಳನ್ನು ವಲಯ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುವುದು. ಈ ಅಧಿಕಾರಿಗಳು ತಮ್ಮ ವಲಯ ಮಟ್ಟದ ಶಾಲಾ ಮಕ್ಕಳು, ಸಾರ್ವಜನಿಕರನ್ನು ಕ್ರೋಡಿಕರಿಸಿ ಸೆಪ್ಟೆಂಬರ್ 15 ರಂದು ಮಾನವ ಸರಪಳಿಯನ್ನು ನಿರ್ಮಾಣ ಮಾಡವುದು ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.
ಮದ್ದೂರಿನಿಂದ ಶ್ರೀರಂಗಪಟ್ಟಣದ ವ್ಯಾಪ್ತಿಯಲ್ಲಿ ಬರುವ ಪ್ರತಿ ಶಾಲೆಗಳ ಪಟ್ಟಿಯನ್ನು ಈಗಾಗಲೇ ಪಡೆಯಲಾಗಿದ್ದು, 6 ರಿಂದ 10 ನೇ ತರಗತಿಯವರೆಗೆ ಮದ್ದೂರಿನಲ್ಲಿ ಒಟ್ಟು 4,400 ವಿದ್ಯಾರ್ಥಿಗಳು, ಮಂಡ್ಯ ಪೂರ್ವ ವಲಯದಲ್ಲಿ 16,000 ವಿದ್ಯಾರ್ಥಿಗಳು, ಶ್ರೀರಂಗಪಟ್ಟಣದಲ್ಲಿ 6,000 ವಿದ್ಯಾರ್ಥಿಗಳಿದ್ದು, ಒಟ್ಟು – 26,400 ವಿದ್ಯಾರ್ಥಿಗಳನ್ನು ಮಾನವ ಸರಪಳಿಯ ನಿರ್ಮಾಣಕ್ಕೆ ಭಾಗವಹಿಸುವುದು. ಇವರುಗಳ ಜೊತೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳು, ರೆಡ್ ಕ್ರಾಸ್ ಸಂಸ್ಥೆ, ಲಯನ್ಸ್ ಕ್ಲಬ್, ಎಲ್ಲಾ ಸಂಘ ಸಂಸ್ಥೆಗಳು, ಭಾರತ್ ಸ್ಕೌಟ್ ಮತ್ತು ಗೈಡ್ಸ್, ಎನ್ ಎಸ್ ಎಸ್, ಎನ್ ಸಿ ಸಿ, ಸೇವಾಧಳ ಹಾಗೂ ಎಲ್ಲಾ ಇಲಾಖೆಯವರು ಮಾನವ ಸರಪಳಿಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಬೃಹತ್ ಮಾನವ ಸರಪಳಿ ನಿರ್ಮಿಸಲು ಇಂದಿನಿಂದಲೇ ಎಲ್ಲಾ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ರಸ್ತೆಯ ಎಡಭಾಗದಲ್ಲಿ ಮಾನವ ಸರಪಳಿಯು ಏರ್ಪಡಬೇಕು ಎಂದರು.
ಇಂದಿನ ಯುವಜನತೆಯು ಮಾನವ ಸರಪಳಿಯನ್ನು ನಿರ್ಮಿಸಿ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ಕೂಡ ಸಮಾಜಕ್ಕೆ ಸತ್ಪ್ರಜೆಯಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ದೇಶದ ಗೌರವವನ್ನು ಕಾಪಾಡಬೇಕು ಎಂದರು.
ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮಸ್ಥರು, ಜನಪ್ರತಿನಿಧಿಗಳು ಭಾಗವಹಿಸಬೇಕು. ಮಾನವಸರಪಳಿಯ ರೂಟ್ ಮ್ಯಾಪ್ ಅನ್ನು ಸಿದ್ದಪಡಿಸಿ ಸೆಪ್ಟೆಂಬರ್ 15 ರೊಳಗೆ ಒಂದು ದಿನ ಎಲ್ಲರೂ ಒಮ್ಮೆ ಮುಂಚಿತವಾಗಿ ಮಾನವ ಸರಪಳಿ ನಿರ್ಮಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಡಿವೈಎಸ್ ಪಿ ಹೆಚ್.ಎಸ್ .ಮುರಳಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-
Mysore4 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State7 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State7 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health7 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized3 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized9 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State7 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.