ಬೆಂಗಳೂರು: ದೀರ್ಘಕಾಲಿಕ ಸಿಎಂ ಆಗಿ ರೆಕಾರ್ಡ್ ಮಾಡಿರುವ ಸಿಎಂ ಸಿದ್ದರಾಮಯ್ಯ ನಾಳೆ ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ದತೆ ನಡೆಸಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ, ನಾಳೆ ಬೆಳಗ್ಗೆ 10:15ಕ್ಕೆ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಗಾತ್ರ ನಾಲ್ಕೂವರೆ ಲಕ್ಷ ಕೋಟಿ ಮುಟ್ಟುವ ಸಾಧ್ಯತೆ ಇದೆ. ಕಳೆದ ಬಾರಿ ಆದಾಯ ಸಂಗ್ರಹದ ಗುರಿ ಮುಟ್ಟಿಲ್ಲ. ಇದರ ಪರಿಣಾಮವೂ 2026-27ನೇ ಸಾಲಿನ ಬಜೆಟ್ ಮೇಲೆ ಪರಿಣಾಮ ಬೀರಲಿದೆ.

ಸಾಲ ಮಾಡಿ ತುಪ್ಪ ತಿನ್ನುವುದು ರಾಜ್ಯಕ್ಕೆ ಹೊಸದೇನಲ್ಲ. ಈ ಬಾರಿ 75 ಸಾವಿರ ಕೋಟಿ ರೂ. ಸಾಲ ಮಾಡುವ ಲೆಕ್ಕಾಚಾರದಲ್ಲಿದ್ದು, ರಾಜ್ಯದ ಸಾಲ 8 ಲಕ್ಷದ 30 ಸಾವಿರ ದಾಟುವ ಸಾಧ್ಯತೆಯೇ ಅಧಿಕ. ಗ್ಯಾರಂಟಿ ಯೋಜನೆಗಳ ಹೊರೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ , ಸಿಎಂ ಹಾದಿಯಾಗಿ ಕೆಲವರು ಮಾತನಾಡಿದ್ದಾರೆ. ಆದರೆ ಬಜೆಟ್‌ನಲ್ಲಿ ಪರಿಷ್ಕರಣೆ ಬಗ್ಗೆ ಸುಳಿವು ನೀಡದೆ ಹಂತ ಹಂತವಾಗಿ ಲೆಕ್ಕಾಚಾರ ಹಾಕಲು ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಗ್ಯಾರಂಟಿಗಳಿಗೆ ಮೀಸಲಿಡುವ ಹಣ ಮುಂದುವರಿಸುವ ಜೊತೆಗೆ ಕಡಿಮೆ ಹಣ ಮೀಸಲಿಟ್ಟು ಮಹಿಳೆಯರಿಗೆ ರಿಯಾಯಿತಿ ಯೋಜನೆ ಘೋಷಣೆ ಮಾಡುವ ಸಾಧ್ಯತೆಯೂ ಇದೆ. ಈ ಮಧ್ಯೆ ಅಭಿವೃದ್ಧಿ ಯೋಜನೆಗಳತ್ತ ಗಮನಹರಿಸಬೇಕಿದ್ದು ಸಿಎಂ ಬ್ಯಾಲೆನ್ಸಿಂಗ್ ಬಜೆಟ್ ಮಂಡಿಸುತ್ತಾರೆ ಎನ್ನಲಾಗುತ್ತಿದೆ.




